ಅಧಿಕಾರ ಹಂಚಿಕೆ ಕಿತ್ತಾಟದ ನಡುವೆಯೇ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಬೆಂಗಳೂರು ಜಲಮಂಡಳಿಯ ಗ್ರಾಹಕರು ಬಾಕಿ ಉಳಿಸಿಕೊಂಡಿರುವ ನೀರಿನ ಶುಲ್ಕದ ಬಡ್ಡಿ ಮತ್ತು ದಂಡವನ್ನು ಶೇ.100 ರಷ್ಟು ಮನ್ನಾ ಮಾಡಲು ನಿರ್ಧರಿಸುವ ಸಾಧ್ಯತೆಯಿದೆ.

ಬೆಂಗಳೂರು : ಅಧಿಕಾರ ಹಂಚಿಕೆ ಕಿತ್ತಾಟದ ನಡುವೆಯೇ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಬೆಂಗಳೂರು ಜಲಮಂಡಳಿಯ ಗ್ರಾಹಕರು ಬಾಕಿ ಉಳಿಸಿಕೊಂಡಿರುವ ನೀರಿನ ಶುಲ್ಕದ ಬಡ್ಡಿ ಮತ್ತು ದಂಡವನ್ನು ಶೇ.100 ರಷ್ಟು ಮನ್ನಾ ಮಾಡಲು ನಿರ್ಧರಿಸುವ ಸಾಧ್ಯತೆಯಿದೆ.

ನೀರಿನ ಬಾಕಿಯ ಅಸಲು ಹಣವನ್ನು ಪೂರ್ಣ ಪಾವತಿಸಿದರೆ ಮಾತ್ರ ಒಂದು ಬಾರಿಗೆ ಅನ್ವಯವಾಗುವಂತೆ (ಓಟಿಎಸ್‌) ರಿಯಾಯಿತಿ ಅನ್ವಯವಾಗಲಿದೆ ಎಂದು ಸರ್ಕಾರ ಷರತ್ತು ವಿಧಿಸಲಿದೆ.

ಸಿಎಸ್‌ಆರ್‌ ನೀತಿ ಜಾರಿ?:

ಮತ್ತೊಂದೆಡೆ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್‌ಆರ್‌) ಖಾಸಗಿ ಕಂಪನಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಎನ್‌ಜಿಒ, ತಮ್ಮದೇ ಅಂಗ ಸಂಸ್ಥೆಗಳಿಗೆ ನೀಡುವುದು ಸೇರಿದಂತೆ ಹಲವು ರೀತಿಯ ಅಕ್ರಮಗಳು ನಡೆಯುತ್ತಿವೆ.

ಇದಕ್ಕೆ ಬ್ರೇಕ್‌ ಹಾಕಿ ಸಿಎಸ್‌ಆರ್‌ ನಿಧಿಯಿಂದ ರಾಜ್ಯದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಬಳಸುವುದನ್ನು ಕಡ್ಡಾಯಗೊಳಿಸಲು ಸಾಂಸ್ಥಿಕ ಜವಾಬ್ದಾರಿ ಹೊಣೆಗಾರಿಕೆ ನೀತಿ ಜಾರಿ ಮಾಡಲು ಗುರುವಾರದ ಸಂಪುಟ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ.

ವಿವಿಧ ವಿಧೇಯಕಗಳಿಗೆ ಒಪ್ಪಿಗೆ ಸಾಧ್ಯತೆ:

ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ವಿಧೇಯಕ-2025ಕ್ಕೆ ಅನುಮೋದನೆ ಸಾಧ್ಯತೆ ಇದೆ.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಿಗಳು (ತಿದ್ದುಪಡಿ) ವಿಧೇಯಕ-2025,

ಕರ್ನಾಟಕ ರಾಜ್ಯ ಹಜ್‌ ಸಮಿತಿ ನಿಯಮಾವಳಿ-2025,

ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ-2025,

ಔಷಧಗಳು ಮತ್ತು ಸೌಂದರ್ಯವರ್ಧಕಗಳು (ಕರ್ನಾಟಕ ತಿದ್ದುಪಡಿ) ವಿಧೇಯಕ- 2025 ಸೇರಿ ವಿವಿಧ ವಿಧೇಯಕಗಳಿಗೆ ಒಪ್ಪಿಗೆ ಪಡೆದು ಮುಂದಿನ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ.

ಅಧಿಕಾರ ಹಂಚಿಕೆ ಕುರಿತು ಚರ್ಚೆ ಸಾಧ್ಯತೆ?

ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ಉಂಟಾಗಿರುವ ರಾಜಕೀಯ ತಿಕ್ಕಾಟದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ.

ಈ ವೇಳೆ ಯಾರೊಬ್ಬರೂ ಬಹಿರಂಗ ಹೇಳಿಕೆ ನೀಡಬಾರದು. ಪಕ್ಷದ ಹೈಕಮಾಂಡ್‌ ಸೂಚನೆಯಂತೆ ಎಲ್ಲರೂ ನಡೆದುಕೊಳ್ಳಬೇಕು. ಅಧಿವೇಶನ ಹತ್ತಿರವಿರುವ ವೇಳೆ ಅನಗತ್ಯ ಹೇಳಿಕೆಗಳು ನೀಡುವುದು ಬೇಡ. ಅಧಿವೇಶನಕ್ಕೆ ಅಗತ್ಯ ಸಿದ್ಧತೆ ನಡೆಸಿಕೊಳ್ಳಬೇಕು ಎಂದು ಸೂಚನೆ ನೀಡುವ ನಿರೀಕ್ಷೆಯಿದೆ.