ನೀರಿನ ಶುಲ್ಕ, ಆಸ್ತಿ ತೆರಿಗೆ ವಸೂಲಿ ಕೆಲಸ ಸ್ತ್ರೀಶಕ್ತಿಗೆ

| Published : Jun 21 2024, 01:07 AM IST

ಸಾರಾಂಶ

ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಬಿಲ್‌ ಹಾಗೂ ಆಸ್ತಿ ತೆರಿಗೆ ಬಾಕಿ ವಸೂಲಾತಿ ಜವಾಬ್ದಾರಿಯನ್ನು ಮಹಿಳಾ ಸ್ವ ಸಹಾಯ ಗುಂಪು, ಸರ್ಕಾರೇತರ ಸಂಸ್ಥೆ ಹಾಗೂ ಸ್ತ್ರೀಶಕ್ತಿ ಗುಂಪುಗಳಿಗೆ ವಹಿಸಿಕೊಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ನೀರಿನ ಶುಲ್ಕ, ಆಸ್ತಿ ತೆರಿಗೆ ವಸೂಲಿ ಕೆಲಸ ಸ್ತ್ರೀ ಶಕ್ತಿ ಹೆಗಲಿಗೆ

ವಸೂಲಿ ಮಾಡಿದ ಮೊತ್ತದಲ್ಲಿ ಶೇ.5ರಷ್ಟು ಕಮಿಷನ್‌ । ಸಂಪುಟ ಸಭೆ ನಿರ್ಧಾರ

ಕನ್ನಡಪ್ರಭ ವಾರ್ತೆ, ಬೆಂಗಳೂರು

ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಬಿಲ್‌ ಹಾಗೂ ಆಸ್ತಿ ತೆರಿಗೆ ಬಾಕಿ ವಸೂಲಾತಿ ಜವಾಬ್ದಾರಿಯನ್ನು ಮಹಿಳಾ ಸ್ವ ಸಹಾಯ ಗುಂಪು, ಸರ್ಕಾರೇತರ ಸಂಸ್ಥೆ ಹಾಗೂ ಸ್ತ್ರೀಶಕ್ತಿ ಗುಂಪುಗಳಿಗೆ ವಹಿಸಿಕೊಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ರೀತಿ ವಸೂಲಿ ಮಾಡಿರುವ ನೀರಿನ ಬಿಲ್‌, ಆಸ್ತಿ ತೆರಿಗೆ ಹಾಗೂ ಇವುಗಳ ಬಾಕಿ ಹಣದ ಮೊತ್ತದಲ್ಲಿ ಶೇ.5 ರಷ್ಟು ಹಣವನ್ನು ಪ್ರೋತ್ಸಾಹ ಧನವಾಗಿ ವಸೂಲಿ ಮಾಡಿದ ಮಹಿಳಾ ಸ್ವಸಹಾಯ ಗುಂಪು ಅಥವಾ ಎನ್‌ಜಿಒಗಳಿಗೆ ನೀಡಲು ನಿರ್ಧರಿಸಲಾಗಿದೆ.

ಈ ಬಗ್ಗೆ ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌, ರಾಜ್ಯದಲ್ಲಿ 315 ನಗರ ಸ್ಥಳೀಯ ಸಂಸ್ಥೆಗಳು ಇವೆ. ಈ ಪೈಕಿ 10 ಮಹಾನಗರ ಪಾಲಿಕೆ, 61 ನಗರಸಭೆ, 114 ಪಟ್ಟಣ ಪಂಚಾಯಿತಿ, 4 ಅಧಿಸೂಚಿತ ಪ್ರದೇಶಗಳಿವೆ. ಈ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2025ರ ವೇಳೆಗೆ ಜನಸಂಖ್ಯೆ 2.02 ಕೋಟಿಗೆ ತಲುಪಲಿದೆ.

ಇನ್ನು 51.51 ಲಕ್ಷ ಮನೆಗಳಿದ್ದು, 30.05 ಲಕ್ಷ ಮನೆಗಳು ಕುಡಿಯುವ ನೀರಿನ ಸಂಪರ್ಕ ಹೊಂದಿವೆ. ಇವುಗಳಿಂದ ನೀರಿನ ಶುಲ್ಕ ವಸೂಲಿ ಹಾಗೂ ಆಸ್ತಿ ತೆರಿಗೆ ವಸೂಲಿಗೆ ಸಿಬ್ಬಂದಿ ಕೊರತೆಯಿದೆ. ಪ್ರತಿ ವರ್ಷ 1,860 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸಬೇಕಿದೆ. ಹೀಗಾಗಿ ಸ್ವಸಹಾಯ ಗುಂಪುಗಳ ನೆರವು ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಜಿಲ್ಲಾವಾರು ತಂಡಗಳನ್ನು ರಚಿಸಿ ಬಾಕಿ ಇರುವ ನೀರಿನ ಶುಲ್ಕ ವಸೂಲಿ ಕುರಿತು ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಬೇಕು. ಈ ಕುರಿತು ಸರ್ಕಾರಕ್ಕೆ ಪ್ರತಿ ತಿಂಗಳು ವರದಿ ನೀಡಬೇಕು. ನೀರಿನ ಶುಲ್ಕ, ಆಸ್ತಿ ತೆರಿಗೆ ವಸೂಲಿ ಆಗದಿದ್ದರೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೇ ಹೊಣೆ ಎಂದು ಮಾಹಿತಿ ನೀಡಿದರು.ಬಾಕ್ಸ್

ಸರ್ಕಾರಿ ಶಾಲಾ-ಕಾಲೇಜಿಗೆ ಉಚಿತ ವಿದ್ಯುತ್‌, ನೀರುರಾಜ್ಯದಲ್ಲಿರುವ 46,829 ಸರ್ಕಾರಿ ಶಾಲೆ, 1,234 ಪದವಿ ಪೂರ್ವ ಕಾಲೇಜುಗಳಿಗೆ ರಾಜ್ಯ ಸರ್ಕಾರದಿಂದಲೇ ಉಚಿತ ನೀರು ಹಾಗೂ ವಿದ್ಯುತ್ ಕಲ್ಪಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಈವರೆಗೆ ನೀರಿನ ಶುಲ್ಕ ಹಾಗೂ ವಿದ್ಯುತ್‌ ಶುಲ್ಕವನ್ನು ಶಾಲಾ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿಗಳೇ ಪಾವತಿಸಬೇಕಿತ್ತು. ಇನ್ನು ಮುಂದೆ ಈ ಹಣವನ್ನು ಸರ್ಕಾರ ಪಾವತಿಸುತ್ತದೆ. ಇದರಿಂದ ಪ್ರತಿ ವರ್ಷ ಸರ್ಕಾರಕ್ಕೆ 29.19 ಕೋಟಿ ರು. ಹೊರೆ ಬೀಳಲಿದೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು.

ಆರು ವಿವಿ.ಗಳ ಗುಣಮಟ್ಟ ಹೆಚ್ಚಿಸಲು 279 ಕೋಟಿ ರು.:

ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನದ ಅಡಿ ರಾಜ್ಯದ ಆರು ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಬೋಧನೆ, ಕಲಿಕೆಯ ಉತ್ಕೃಷ್ಟತೆ ಹೆಚ್ಚಿಸುವುದು, ಮಾನ್ಯತೆ ಸುಧಾರಣೆ, ಉದ್ಯೋಗ ಅರ್ಹತೆ ಹಾಗೂ ಡಿಜಿಟಲ್‌ ಮೂಲಸೌಕರ್ಯ ಹೆಚ್ಚಿಸುವ ಉದ್ದೇಶದಿಂದ 279 ಕೋಟಿ ರು. ವಿಶೇಷ ಅನುದಾನ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬೆಂಗಳೂರು ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಕಲಬುರಗಿ ಹಾಗೂ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯಗಳ ಗುಣಮಟ್ಟ ಹೆಚ್ಚಿಸುವ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 279 ಕೋಟಿ ರು. ವೆಚ್ಚದಲ್ಲಿ ಕೇಂದ್ರವು 167.86 ಕೋಟಿ ರು. ಭರಿಸಲಿದ್ದು, ರಾಜ್ಯ ಸರ್ಕಾರ 111.91 ಕೋಟಿ ರು. ಭರಿಸಲಿದೆ.ಇನ್ನು ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳ ಗುಣಮಟ್ಟ ಪರಿಶೀಲನೆ ನಡೆಸಿ ವರದಿ ನೀಡಲು ಸಚಿವ ಸಂಪುಟ ಉಪ ಸಮಿತಿ ರಚನೆಗೂ ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.==

ಇತರೆ ತೀರ್ಮಾನಗಳು:

- ಹಾಸನ ಜಿಲ್ಲೆ ಮೊಸಳೆಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯ 59.57 ಕೋಟಿ ರು. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

- ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೆಂಗಳೂರಿನ ರೋಟರಿ ಇಂಟರ್‌ನ್ಯಾಷನಲ್‌ ವತಿಯಿಂದ 2.37 ಕೋಟಿ ರು. ವೆಚ್ಚದಲ್ಲಿ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮ ಮಾಡಲು ಒಪ್ಪಿಗೆ.

- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಕಣಬರಗಿ ಗ್ರಾಮದ ವಸತಿ ಯೋಜನೆಗೆ 127.71 ಕೋಟಿ ಬದಲು 137.70 ಕೋಟಿ ರು. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

- ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕುಸನೂರ ಗ್ರಾಮದ ವಸತಿ ಯೋಜನೆಗೆ 94.80 ಕೋಟಿ ರು. ಬದಲಿಗೆ 122.40 ಕೋಟಿ ರು.ಗಳ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ.

- ಮೈಸೂರು ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ 75 ಕೋಟಿ ರು.ಗಳ ವೆಚ್ಚದಲ್ಲಿ ನೂತನ ಹೊರರೋಗಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ.