ಸಾರಾಂಶ
ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನಕ್ಕೆ ಅನುಮತಿ ನೀಡಬೇಕೆಂದು ಕೋರಿ ಆರ್‌ಎಸ್‌ಎಸ್ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿಗೆ 2ನೇ ಸಲ ಅರ್ಜಿ ಸಲ್ಲಿಸಿದ್ದಾರೆ. ಭೀಮ್ ಆರ್ಮಿ ಸಂಘಟನೆಯ ಪ್ರಮುಖರೂ ಪಥ ಸಂಚಲನಕ್ಕೆ ಅನುಮತಿ ಕೊಡಿ ಎಂದು ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಕಲಬುರಗಿ : ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನಕ್ಕೆ ಅನುಮತಿ ನೀಡಬೇಕೆಂದು ಕೋರಿ ಆರ್‌ಎಸ್‌ಎಸ್ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿಗೆ 2ನೇ ಸಲ ಅರ್ಜಿ ಸಲ್ಲಿಸಿದ್ದಾರೆ.
ಕಲಬುರಗಿ ಹೈಕೋರ್ಟ್ ಪೀಠದ ಸೂಚನೆಯಂತೆ ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್ ಅವರು, ಸಂಘದ ಮುಖಂಡರು, ಬೌದ್ಧಿಕ ಪ್ರಮುಖ ಕೃಷ್ಣಾ ಜೋಶಿ ಸೇರಿದಂತೆ ಹಲವರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರನ್ನು ಖುದ್ದು ಭೇಟಿ ಮಾಡಿ, ನ.2ರ ಪಥ ಸಂಚಲನಕ್ಕೆ ಅನುಮತಿ ಕೋರಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ.
ಅ.17ರಂದು ಸಂಘ ನೀಡಿದ ಮನವಿಗೆ ಚಿತ್ತಾಪುರ ತಹಸೀಲ್ದಾರ ಕೋರಿದಂತೆ ಪಥ ಸಂಚಲನ ಸಮಯ, ದಿನಾಂಕ, ಮಾರ್ಗ, ಸ್ಥಳ ಮಾಹಿತಿ, ಇನ್ನಿತರ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇವೆ. ಪಂಥ ಸಂಚಲನಕ್ಕೆ ಹೊಸ ದಿನಾಂಕವಾಗಿ ನ.2ನ್ನು ನಿಗದಿಪಡಿಸಿದ್ದೇವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅ.19ರ ಭಾನುವಾರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ಹಮ್ಮಿಕೊಂಡಿತ್ತು. ಈ ಸಂಬಂಧ ಅ.17ರಂದು ಆರ್‌ಎಸ್‌ಎಸ್ ಮುಖಂಡರು ತಹಸೀಲ್ದಾರ್ ಅವರಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅದೇ ದಿನ ಭೀಮ್ ಆರ್ಮಿ, ದಲಿತ ಪ್ಯಾಂಥರ್ ಸಂಘಟನೆಗಳವರೂ ಪಥ ಸಂಚಲನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದಾದ ಸಾಧ್ಯತೆಗಳಿವೆ ಎಂಬ ಪೊಲೀಸ್ ವರದಿ ಆಧರಿಸಿ ಚಿತ್ತಾಪುರ ತಹಶೀಲ್ದಾರ್ ಅವರು ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದರು.
ಈ ಆದೇಶ ಪ್ರಶ್ನಿಸಿ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕಲಬುರಗಿ ಹೈಕೋರ್ಟ್ ಪೀಠ, ತಹಶೀಲ್ದಾರ್ ಕೋರಿರುವ ಮಾಹಿತಿಯೊಂದಿಗೆ ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ, ಆರ್‌ಎಸ್‌ಎಸ್ ಮುಖಂಡರು ಸೋಮವಾರ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾಧಿಕಾರಿಯವರ ಸರ್ಕಾರಿ ನಿವಾಸಕ್ಕೆ ತೆರಳಿದ್ದರು. ಎರಡೂ ಕಡೆ ಅವರು ಲಭ್ಯವಿರದ ಕಾರಣ, ಜಿಲ್ಲಾಧಿಕಾರಿಯವರ ಅಧಿಕೃತ ಎರಡು ಇ-ಮೇಲ್‌ಗಳಿಗೆ, ಅವರ ಸರ್ಕಾರಿ ದೂರವಾಣಿ ಸಂಖ್ಯೆಗೆ ವಾಟ್ಸ್ ಆಪ್ ಮುಖಾಂತರ ಅನುಮತಿ ಕೋರಿ, ಮನವಿ ಪತ್ರ ರವಾನಿಸಿದ್ದರು. ಮಂಗಳವಾರ ಖುದ್ದು ಭೇಟಿಯಾಗಿ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ಅ.19ರಂದು ಪಥಸಂಚಲನಕ್ಕೆ ಆರ್‌ಎಸ್‌ಎಸ್ ಪ್ಲ್ಯಾನ್. ಆದರೆ ಇತರೆ ಸಂಘಟನೆಗಳಿಂದಲೂ ಅದೇ ರೀತಿ ಮನವಿ
ಹೀಗಾಗಿ ಅನುಮತಿ ನಿರಾಕರಿಸಿದ್ದ ಜಿಲ್ಲಾಡಳಿತ. ಇದರ ವಿರುದ್ಧ ಹೈಕೋರ್ಟ್‌ಗೆ ಮನವಿ. ಹೊಸ ಅರ್ಜಿಗೆ ಹೈಕೊರ್ಟ್ ಸೂಚನೆ
ಕೋರ್ಟ್ ಆದೇಶದಂತೆ ಎಲ್ಲಾ ದಾಖಲಾತಿಗಳೊಂದಿಗೆ ಜಿಲ್ಲಾಡಳಿತಕ್ಕೆ ಆರ್‌ಎಸ್‌ಎಸ್ ನಾಯಕರಿಂದ ಮತ್ತೆ ಅರ್ಜಿ ಸಲ್ಲಿಕೆ
ನ.2ಕ್ಕೆ ನಮಗೂ ಅವಕಾಶ ನೀಡಿ: ಭೀಮ್ ಆರ್ಮಿ ಅರ್ಜಿ
ಕಲಬುರಗಿ : ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ಭೀಮ್ ಆರ್ಮಿ ಸಂಘಟನೆಯ ಪ್ರಮುಖರೂ ನ.2ರಂದೇ ಚಿತ್ತಾಪುರದಲ್ಲಿ ತಮಗೂ ಪಥ ಸಂಚಲನಕ್ಕೆ ಅನುಮತಿ ಕೊಡಿ ಎಂದು ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಭೀಮ್ ಆರ್ಮಿ ಭಾರತ ಏಕ್ತಾ ಮಿಶನ್ ಯುವ ಸಂಘಟನೆಯ ಪ್ರಮುಖರು ಮಂಗಳವಾರ ಡಿಸಿ ಕಚೇರಿಗೆ ತೆರಳಿ, ನ.2ರಂದೇ ತಮಗೂ ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ನೀಡಿ ಎಂದು ಅರ್ಜಿ ಸಲ್ಲಿಸಿದ್ದಾರೆ.
ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಎಸ್.ಎಸ್. ತವಡೆ, ಆರ್‌ಎಸ್‌ಎಸ್ ಸಂಘಟನೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿದರು. ನೋಂದಣಿ ಇಲ್ಲದ ಆರ್‌ಎಸ್‌ಎಸ್ ಸಂಘಟನೆಗೆ ನೂರು ವರ್ಷದ ಸಂಭ್ರಮಾಚರಣೆ ಎಲ್ಲಿಂದ ಬಂತು?.ನೋಂದಣಿ ಇಲ್ಲದ ಸಂಘಟನೆಯವರು ಬೆತ್ತ ಹಿಡಿದುಕೊಂಡು ಹೋಗಲು ಅಧಿಕಾರಿಗಳು ಹೇಗೆ ಅನುಮತಿ ಕೊಡುತ್ತಾರೆ. ಆರ್‌ಎಸ್‌ಎಸ್ ನವರು ಸಚಿವ ಪ್ರಿಯಾಂಕ್ ಖರ್ಗೆಯವರ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಹೊರಟಿದ್ದಾರೆ. ನಾವು ಭೀಮನ ಮಕ್ಕಳು, ಆರ್‌ಎಸ್‌ಎಸ್ ನವರ ಶಕ್ತಿ ಪ್ರದರ್ಶನಕ್ಕೆ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.
ಬಜಾಜ್ ಕಲ್ಯಾಣ ಮಂಟಪದಿಂದ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ಪಾಲಪ್ ಗಲ್ಲಿ, ಬಸವೇಶ್ವರ ಚೌಕ್, ಹಳೆ ಕಪಡಾ ಬಜಾರ್, ಜನತಾ ಚೌಕ್, ನಾಗಾವಿ ಚೌಕ್, ಸೇವಾಲಾಲ್ ಚೌಕ್, ಪುರಸಭೆ ಎದುರಿನಿಂದ ಗಣೇಶ ಮಂದಿರ, ಕಾಶಿ ಗಲ್ಲಿ, ಬಸ್ ನಿಲ್ದಾಣದಿಂದ ಲಾಡ್ಜಿಂಗ್ ಕ್ರಾಸ್‌ವರೆಗೆ ಪಥ ಸಂಚಲನ ನಡೆಸುತ್ತೇವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.ಅ.19ರಂದು, ಆರ್‌ಎಸ್‌ಎಸ್ ಪಥ ಸಂಚಲನದ ದಿನವೇ ತಮಗೂ ಪಥ ಸಂಚಲನಕ್ಕೆ ಅನುಮತಿ ಕೊಡಿ ಎಂದು ಭೀಮ್ ಆರ್ಮಿ, ದಲಿತ ಪ್ಯಾಂಥರ್ ಸಂಘಟನೆಗಳವರು ಚಿತ್ತಾಪುರ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರಿಂದ, ಕಾನೂನು ಸುವ್ಯವಸ್ಥೆಯ ಕಾರಣ ನೀಡಿ, ತಹಸೀಲ್ದಾರ್ ಅಂದು ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದರು.