ಸಾರಾಂಶ
ಹುಬ್ಬಳ್ಳಿ : ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರ್‌ಎಸ್‌ಎಸ್ ಕುರಿತು ಹೊರಡಿಸಿದ ಆದೇಶವನ್ನೇ ನಮ್ಮ ಸರ್ಕಾರ ಪುನರುಚ್ಚಾರ ಮಾಡಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾಜಿ ಮುಖ್ಯಮಂತ್ತಿ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.
‘ನಾನು ಸಿಎಂ ಆಗಿದ್ದಾಗ ಶಿಕ್ಷಣ ಇಲಾಖೆಯ ಜಾಗದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶವದು. ಆ ಆದೇಶದಲ್ಲಿ ಎಲ್ಲಿಯೂ ಆರ್‌ಎಸ್‌ಎಸ್ ಪದ ಬಳಸಿಲ್ಲ. ನಾವು ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸಿದ್ದೇವೆ ಎಂದು ಎಲ್ಲಿ ಬಳಸಿದ್ದೇವೆ ತೋರಿಸಿ’ ಎಂದು ಸಂಸದ ಶೆಟ್ಟರ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಆರ್‌ಎಸ್‌ಎಸ್ ವಿಚಾರದಲ್ಲಿ ತಮ್ಮ ಮೇಲಿನ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, 2013ರಲ್ಲಿ ಬಿಜೆಪಿಯೇ ಈ ಆದೇಶ ಮಾಡಿತ್ತು ಅಂತಾರೆ. ನಾನು ಸಿಎಂ ಆಗಿದ್ದಾಗಿನ ಆದೇಶವನ್ನೇ ಮುಂದುವರಿಸಿರುವುದಾಗಿ ಹೇಳುತ್ತಾರೆ. ಆವತ್ತು ಆಗಿದ್ದ ಆದೇಶವನ್ನು ಸರಿಯಾಗಿ ಅವರು ಓದಿದ್ದಾರಾ?. ಆದೇಶದಲ್ಲಿ ಎಲ್ಲಿಯೂ ಆರ್‌ಎಸ್‌ಎಸ್ ಪದ ಬಳಸಿಲ್ಲ. ಅದು ನಮ್ಮ ಕ್ಯಾಬಿನೆಟ್ ಸಭೆಯಲ್ಲಿ ಮಾಡಿದ್ದ ಆದೇಶವಲ್ಲ. ಯಾವುದೋ ಒಂದು ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯವರು ಜಾಗ ಕೇಳಿದ್ದರು. ಶಿಕ್ಷಣ ಇಲಾಖೆಯ ಜಾಗದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಆಗ ಶಿಕ್ಷಣ ಇಲಾಖೆಯ ಅಧಿಕಾರಿಗಳು ಡಿಡಿಪಿಐಗೆ ಬರೆದಿರುವ ಆದೇಶವದು. ಆ ಆದೇಶದ ಪ್ರತಿಯನ್ನು ಅವರು ಓದಲಿ. ಇನ್ನಾದರೂ ಕಾಂಗ್ರೆಸ್‌ನವರು ನಾಟಕ ಮಾಡೋದನ್ನು ಬಿಡಲಿ. ಜನರಿಗೆ ತಪ್ಪು ಮಾಹಿತಿ ಕೊಡುವುದನ್ನು ಬಿಡಲಿ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರಕಾರ 2024ರಲ್ಲಿ ಆರ್ ಎಸ್ ಎಸ್ ನಲ್ಲಿ ಭಾಗಿಯಾಗಬಾರದು ಎಂಬ ನಿಷೇದವನ್ನು ಹಿಂಪಡೆದಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನವರಿಗೆ ಜ್ಞಾನ ಇಲ್ಲವಾ? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರದ ಆದೇಶದಲ್ಲಿ ಆರ್‌ಎಸ್‌ಎಸ್ ಹೆಸರೆಲ್ಲಿದೆ?: ಸಿಎಂ
ಬೆಂಗಳೂರು : ನಮ್ಮ ಸರ್ಕಾರ ಆರ್‌ಎಸ್‌ಎಸ್ ನಿಷೇಧ ಮಾಡಿಲ್ಲ. ಯಾವುದೇ ಸಂಘ, ಸಂಸ್ಥೆಗಳು ಶಾಲಾ, ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ಜಗದೀಶ್ ಶೆಟ್ಟರ್ ನೇತೃತ್ವದ ಹಿಂದಿನ ಸರ್ಕಾರದಲ್ಲಿ ನಿಷೇಧಿಸಲಾಗಿತ್ತು. ಬಿಜೆಪಿ ಸರ್ಕಾರದ ಆದೇಶ ಮಾಡಿದ್ದನ್ನೇ ನಾವೂ ಪುನರುಚ್ಚರಿಸಿದ್ದೇವೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಪುತ್ತೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ ಯಾವುದೇ ಸಂಘ, ಸಂಸ್ಥೆಗಳ ಕಾರ್ಯಕ್ರಮ, ಚಟುವಟಿಕೆಗಳಿಗೆ ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ಆರ್‌ಎಸ್‌ಎಸ್ ಎಂದು ಎಲ್ಲೂ ನಿರ್ದಿಷ್ಟ ಉಲ್ಲೇಖ ಮಾಡಿಲ್ಲ.
ಬಿಜೆಪಿಯವರು ಮಾಡಿದ್ದ ಆದೇಶವನ್ನೇ ನಾವೂ ಮಾಡಿದ್ದೇವೆ. ಅವರು ಮಾಡಬಹುದು, ನಾವು ಮಾಡಬಾರದೇ ಎಂದು ಪ್ರಶ್ನಿಸಿದರು.2013 ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಗಳಿಯಾಗಿದ್ದ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು ಶಾಲಾ, ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿದ್ದರು. ಆ ಆದೇಶ ಮಾಡಿರುವುದು ಶಿಕ್ಷಣ ಇಲಾಖೆಯೇ ಹೊರತು ನಾನಲ್ಲ ಎಂದಿದ್ದಾರೆ. ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಆದೇಶ ಹೊರಡಿಸಿದ್ದಾರೆ ಎಂದು ಹೇಳಿದರು.ಅನುಮತಿ ಕಡ್ಡಾಯವಲ್ಲ:ಸಂಘ, ಸಂಸ್ಥೆಗಳಿಗೆ ಅನುಮತಿ ಕೊಡಲೇಬೇಕು ಎಂದೇನೂ ಇಲ್ಲ. ಶಾಂತಿ-ಸುವ್ಯವಸ್ಥೆ ಮೇಲೆ ಬೀರುವ ಪರಿಣಾಮವನ್ನು ಯೋಚಿಸಿ ಅನುಮತಿ ನೀಡುವುದು, ಬಿಡುವುದು ಅವಲಂಬಿತವಾಗಿದೆ ಎಂದು ಹೇಳಿದರು.
ಶೆಟ್ಟರ್ ಸರ್ಕಾರದ ಆದೇಶ ಜಾರಿಗೆ: ಸಚಿವ ಪ್ರಿಯಾಂಕ್
ಬೆಂಗಳೂರು : ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಬೇರೆ ಯಾವುದೇ ಸಂಘ-ಸಂಸ್ಥೆಗಳ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಬಿಜೆಪಿ ಸರ್ಕಾರಾವಧಿಯಲ್ಲಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತೇ ಹೊರತು ನಮ್ಮ ಸರ್ಕಾರವಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಆದರೆ, ಯಾವುದೇ ಇಲಾಖೆ ಆದೇಶ ಹೊರಡಿಸಿದರೂ ಅದು ಸರ್ಕಾರದ ಆದೇಶವೇ ಆಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಯಾವುದೇ ಇಲಾಖೆ ಒಳ್ಳೆಯ ಕೆಲಸ ಮಾಡಿದರೆ ಅಥವಾ ತಪ್ಪು ನಡೆದರೆ ಅದಕ್ಕೆ ಸರ್ಕಾರವೇ ಕಾರಣವಾಗುತ್ತದೆ. ಅದೇ ರೀತಿ ಶಿಕ್ಷಣ ಇಲಾಖೆ ಹೊರಡಿಸಿದ ಈ ಆದೇಶಕ್ಕೂ ಅನ್ವಯವಾಗುತ್ತದೆ. ಹೀಗಾಗಿ ಜಗದೀಶ್ ಶೆಟ್ಟರ್ ಅವರ ಇಂಥ ಹೇಳಿಕೆ ಬಾಲಿಶ ಎಂದರು.ಜತಗೆ, ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಬೇರೆ ಯಾವುದೇ ಸಂಘ-ಸಂಸ್ಥೆಗಳ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆಯೇ ಹೊರತು ಆರ್‌ಎಸ್‌ಎಸ್ ಸೇರಿ ಯಾವುದೇ ಸಂಘಟನೆ ಹೆಸರೂ ಉಲ್ಲೇಖಿಸಿಲ್ಲ ಎಂದರು.
ಮೊದಲ ಬಾರಿಗೆ ವಿಚಿತ್ರ ಪರಿಸ್ಥಿತಿ ಎದುರಾಗಿದೆ. ಕಾನೂನು ಪಾಲನೆ ಮಾಡಿ ಎಂದರೆ ಮಾಡಲ್ಲ, ಪಥ ಸಂಚಲನ ಮಾಡಿಯೇ ಮಾಡುತ್ತೇವೆ ಎನ್ನುತ್ತಾರೆ. ನೋಂದಣಿ ದಾಖಲೆ ತೋರಿಸಲ್ಲ. ಏನಾದರೂ ಅವಘಡ ಸಂಭವಿಸಿದರೆ ಯಾರು ಜವಾಬ್ದಾರರು ಎಂಬುದನ್ನು ಹೇಳುವುದಿಲ್ಲ ಎಂದು ಖರ್ಗೆ ಆರ್‌ಎಸ್‌ಎಸ್ ನಿಲುವನ್ನು ಟೀಕಿಸಿದರು.ರಾಜ್ಯಕ್ಕೆ ಬೇರೆ ನಿಯಮ:ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಬಹುದು ಎಂದು ಕೇಂದ್ರ ಸರ್ಕಾರದ ಅದೇಶ ಇರಬಹುದು, ಆದರೆ ರಾಜ್ಯಕ್ಕೆ ಬೇರೆ ಸೇವಾ ನಿಯಮ ಇದೆ. ಹಾಗಾಗಿ ನಮ್ಮಲ್ಲಿ ಆರ್‌ಎಸ್ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.