ಯಾದಗಿರಿಯಲ್ಲಿ 31ರ ವಯಸ್ಸಿಗೇ ವೃದ್ಧಾಪ್ಯ ವೇತನ!

| N/A | Published : Oct 22 2025, 01:03 AM IST

ಸಾರಾಂಶ

ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, 31-45 ವರ್ಷ ವಯಸ್ಸಿನೊಳಗಿನವರೂ ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನ ಪಡೆಯುತ್ತಿರುವ ಗಂಭೀರ ಆರೋಪಗಳು ಯಾದಗಿರಿ ಜಿಲ್ಲೆಯಾದ್ಯಂತ ಕೇಳಿ ಬರುತ್ತಿವೆ.

ಆನಂದ್‌ ಎಂ. ಸೌದಿ 

 ಯಾದಗಿರಿ :  ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, 31-45 ವರ್ಷ ವಯಸ್ಸಿನೊಳಗಿನವರೂ ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನ ಪಡೆಯುತ್ತಿರುವ ಗಂಭೀರ ಆರೋಪಗಳು ಯಾದಗಿರಿ ಜಿಲ್ಲೆಯಾದ್ಯಂತ ಕೇಳಿ ಬರುತ್ತಿವೆ.

ಸುರಪುರ ತಾಲೂಕಿನಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ, ಯಾದಗಿರಿ ಸೇರಿದಂತೆ ಜಿಲ್ಲೆಯ ಶಹಾಪುರ, ವಡಗೇರಾ, ಹುಣಸಗಿ ಹಾಗೂ ಗುರುಮಠಕಲ್‌ ತಾಲೂಕುಗಳಲ್ಲಿಯೂ ಈ ತೆರನಾದ ಸಾವಿರಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಂದು ಅಂದಾಜಿನಂತೆ, ಯಾದಗಿರಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಅನರ್ಹರಿಗೆ ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಭದ್ರತಾ ಯೋಜನೆಗಳಲ್ಲಿನ ಸವಲತ್ತುಗಳನ್ನು ಅಕ್ರಮವಾಗಿ ನೀಡಲಾಗಿದ್ದು, ಯಾದಗಿರಿ ಜಿಲ್ಲೆಯೊಂದರಿಂದಲೇ ಪ್ರತಿ ತಿಂಗಳು 12 ಕೋಟಿ ರು.ಗಳಿಗೂ ಹೆಚ್ಚು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಲಾಗುತ್ತಿದೆ ಎನ್ನಲಾಗುತ್ತಿದೆ. ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ 1200 ರು. ಪೆನ್ಷನ್‌ ಸಿಗಲಿದೆ.

ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ₹10000ಕ್ಕೆ ವೃದ್ಧಾಪ್ಯ-ವಿಧವಾ ಹಾಗೂ ₹5000ಕ್ಕೆ ಅಂಗವಿಕಲರ ಪಿಂಚಣಿ ಆದೇಶ ಮಂಜೂರು ಮಾಡಲಾಗುತ್ತಿದೆ. 31 ರಿಂದ 45 ವರ್ಷದೊಳಗಿನವರಿಗೆ ವೃದ್ಧಾಪ್ಯ ವೇತನ ಮಂಜೂರು ಮಾಡಿರುವುದು ಅಚ್ಚರಿ ಮೂಡಿಸಿದ್ದರೆ, ದೈಹಿಕವಾಗಿ ಯಾವುದೇ ನ್ಯೂನ್ಯತೆಗಳಿರದಿದ್ದರೂ, ಬೇರೊಬ್ಬರ ಭಾವಚಿತ್ರಕ್ಕೆ ಮುಖ ಅಂಟಿಸಿ ಮಾಸಾಶನ ಆದೇಶ ನೀಡಲಾಗಿದೆ. 

ಗ್ರಾಮ ಹಾಗೂ ತಾಲೂಕು ಮಟ್ಟದ ಕೆಲವು ಅಧಿಕಾರಿಗಳ ಪಾತ್ರವೂ ಈ ನಕಲಿ ದಾಖಲೆಗಳನ್ನು ಸೃಷ್ಟಿಸುವಲ್ಲಿ ಕಂಡು ಬರುತ್ತಿದೆ ಎಂದು ಸಾಮಾಜಿಕ ಹೋರಾಟಗಾರ, ಶಹಾಪುರದ ಮಾನಪ್ಪ ಹಡಪದ ಆರೋಪಿಸುತ್ತಾರೆ. ಈ ಸಂಬಂಧ ದಾಖಲೆಗಳ ಸಮೇತ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮಾನಪ್ಪ ಅವರು ದೂರು ನೀಡಿದ್ದಾರೆ. 

ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಎಸ್ಪಿಗೆ ದೂರು:ಈ ಮಧ್ಯೆ, ಸುರಪುರ ತಾಲೂಕಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಇಲಾಖಾ ಕ್ರಮವಲ್ಲದೆ ಕ್ರಿಮಿನಲ್‌ ಪ್ರಕರಣವನ್ನೂ ದಾಖಲಿಸಬೇಕೆಂದು ಸುರಪುರ ನಗರಸಭೆ ಸದಸ್ಯ ಸೋಮನಾಥ್ ಡೋಣ್ಣೆಗೇರಾ ಮಂಗಳವಾರ ಎಸ್ಪಿ ಪೃಥ್ವಿಕ್‌ ಶಂಕರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

 ಸುರಪುರ ತಾಲೂಕಿನಲ್ಲಿ ನಕಲಿ ಪಿಂಚಣಿ ಕುರಿತು ಅ.20 ರಂದು ‘ಕನ್ನಡಪ್ರಭ’ ದಲ್ಲಿ ಪ್ರಕಟಗೊಂಡ ವರದಿ ಸಂಚಲನ ಮೂಡಿಸಿತ್ತು. ಅರ್ಜಿದಾರರ ಮೂಲ ದಾಖಲೆಗಳನ್ನೇ ಪರಿಶೀಲಿಸದೆ, ಪಿಂಚಣಿ ಮಂಜೂರು ಮಾಡಿದ ಪ್ರಕರಣಗಳು ಮೇಲ್ನೋಟಕ್ಕೆ ಕಂಡು ಬಂದಿದ್ದವು. ಕೆಲವರಿಗೆ ಅವರಿಗೇ ಗೊತ್ತಿರದಿದ್ದರೂ ಅವರ ಹೆಸರುಗಳಲ್ಲಿ ಪಿಂಚಣಿ ಮಂಜೂರಾಗಿರುವುದೂ ಪತ್ತೆಯಾಗಿವೆ.

Read more Articles on