45-50 ವಯಸ್ಸಿಗೇ ವೃದ್ಧಾಪ್ಯ ವೇತನನೀಡಿ ಕೋಟ್ಯಂತರ ರುಪಾಯಿ ಗುಳುಂ

| Published : Oct 20 2025, 01:02 AM IST

ಸಾರಾಂಶ

ಸುರಪುರ ತಾಲೂಕಿನಲ್ಲಿ ‘ಸಂಧ್ಯಾ ಸುರಕ್ಷಾ’ಯೋಜನೆಯ ಹಣವನ್ನು ಲೂಟಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ, ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ಸರ್ಕಾರ ಆರ್ಥಿಕ ಸಹಾಯವನ್ನು ಒದಗಿಸುವ ಸದುದ್ದೇಶದಿಂದ, ಸಾಮಾಜಿಕ ಭದ್ರತಾ ಯೋಜನೆಯಡಿ ಸರ್ಕಾರ ‘ಸಂಧ್ಯಾ ಸುರಕ್ಷಾ’ ಹೆಸರಲ್ಲಿ ಮಾಸಿಕ ₹1200 ಪಿಂಚಣಿ ನೀಡುತ್ತದೆ.

ಆದರೆ, ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಸುಳ್ಳು ದಾಖಲೆಗಳ ಸೃಷ್ಟಿಸಿ, 45-50 ವರ್ಷ ವಯಸ್ಸಿನವರಿಗೆ ‘ಸಂಧ್ಯಾ ಸುರಕ್ಷಾ’ ಯೋಜನೆಯಡಿ ಮಾಸಿಕ ಪಿಂಚಣಿ ₹1200 ಮಂಜೂರು ಮಾಡಿದ್ದು, ಏನಿಲ್ಲವೆಂದರೂ ಈ ತಾಲೂಕು ಒಂದರಲ್ಲೇ ಸುಮಾರು 15 ಸಾವಿರಕ್ಕೂ ಹೆಚ್ಚು ನಕಲಿ ಫಲಾನುಭವಿಗಳ ಮೂಲಕ ಸರ್ಕಾರದ ಕೋಟ್ಯಂತರ ರುಪಾಯಿಗಳನ್ನು ಲೂಟಿ ಹೊಡೆಯಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

ಸರ್ಕಾರದ ಮಹತ್ವಾಕಾಂಕ್ಷಿ ಈ ಯೋಜನೆಯ ಹೆಸರಲ್ಲಿ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗುತ್ತಿದ್ದು, ಇದನ್ನು ತಡೆಯುವಂತೆ ಕೋರಿ ಸುರಪುರ ನಗರಸಭೆ ಸದಸ್ಯ ಸೋಮನಾಥ ಡೋಣ್ಣೆಗೇರಾ, ನಕಲಿ ಫಲಾನುಭವಿಗಳ ಪಟ್ಟಿ ಸಮೇತ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಇದಕ್ಕೆಂದೇ ಕೆಲವು ದಲ್ಲಾಳಿಗಳು ಸೃಷ್ಟಿಯಾಗಿದ್ದು, ಅರ್ಹರಿರದಿದ್ದರೂ ಅವರ ಹೆಸರಲ್ಲಿ ಸಂಧ್ಯಾ ಸುರಕ್ಷಾ ಯೋಜನೆ ಮಂಜೂರು ಮಾಡಿಸಿ, 5 ರಿಂದ 8 ಸಾವಿರ ರು.ಗಳವರೆಗೆ ಲಂಚ ಪಡೆಯುತ್ತಾರೆ. ಕೆಲವೊಮ್ಮೆ ಗ್ರಾಮ ಲೆಕ್ಕಿಗರು ಅನರ್ಹರ ಅರ್ಜಿಗಳನ್ನು ಆರಂಭದಲ್ಲೇ ತಿರಸ್ಕರಿಸಿದ್ದರೂ, ಮೇಲಿನ ಹಂತದ ಅಧಿಕಾರಿಗಳು ಪ್ರಭಾವದಿಂದ ಮಂಜೂರು ಮಾಡುತ್ತಾರೆ ಎಂದು ಸೋಮನಾಥ್‌ ದಾಖಲೆಗಳ ಸಮೇತ ದೂರು ನೀಡಿದ್ದಾರೆ.ಕೋಟ್‌......

ಸುರಪುರ ತಾಲೂಕಿನಲ್ಲಿ ನಕಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿದಾರರ ಪತ್ತೆ ಹಚ್ಚಿ, ಸರ್ಕಾರದ ಬೊಕ್ಕಸಕ್ಕಾಗುತ್ತಿರುವ ನಷ್ಟ ಉಳಿಸಬೇಕಿದೆ. ಅಧಿಕಾರಿಗಳ ಪಾತ್ರವೂ ಇದರಲ್ಲಿದ್ದು, ಅವರ ವಿರುದ್ಧ ತನಿಖೆ ನಡೆಸಿ ಆಡಳಿತ ಕ್ರಮ ಕೈಗೊಳ್ಳಬೇಕು.

-ಸೋಮನಾಥ್‌ ಡೋಣ್ಣೆಗೇರಾ, ನಗರಸಭೆ ಸದಸ್ಯ, ಸುರಪುರ.