ಸುರಪುರ ರಾಜಾ ವೆಂಕಟಪ್ಪ ನಾಯಕ ಕನ್ನಡ ನಾಡಿನ ಐಕಾನ್

| Published : Sep 01 2025, 01:03 AM IST

ಸಾರಾಂಶ

ಬ್ರಿಟಿಷರ ದಾಸ್ಯದ ವಿರುದ್ಧ 1857ರ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವತಂತ್ರದ ಕಿಡಿ ಹೊತ್ತಿಸಿ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಕನ್ನಡ ನಾಡಿನ ಐಕಾನ್ ಆಗಿದ್ದಾರೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಶಾಸನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಮರೇಶ ಯತಗಲ್ ಹೇಳಿದರು.

ಸುರಪುರ: ಬ್ರಿಟಿಷರ ದಾಸ್ಯದ ವಿರುದ್ಧ 1857ರ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವತಂತ್ರದ ಕಿಡಿ ಹೊತ್ತಿಸಿ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಕನ್ನಡ ನಾಡಿನ ಐಕಾನ್ ಆಗಿದ್ದಾರೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಶಾಸನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಮರೇಶ ಯತಗಲ್ ಹೇಳಿದರು.

ನಗರದ ಗರುಡಾದ್ರಿ ಕಲಾ ಮಂದಿರದ ರಾಣಿ ಈಶ್ವರಮ್ಮ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸುರಪುರ ಸಂಸ್ಥಾನದ ವ್ಯಕ್ತಿ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿ, ಬ್ರಿಟಿಷರ ತೀವ್ರತೆ ಅರ್ಥವಾಗಿದ್ದರೂ ಬಹುದೊಡ್ಡ ಹೋರಾಟ ನಡೆಸಿದರು. ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಸುರಪುರ ಸಂಸ್ಥಾನದ ಅರಸು ಅರಿತಿದ್ದರು. ವರ್ತಮಾನದೊಂದಿಗೆ ಎಂದಿಗೂ ರಾಜಿಯಾಗಲಿಲ್ಲ. ಈ ಸ್ವಾಭಿಮಾನ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿಯಾಯಿತು ಎಂದರು.

ಕರ್ನಾಟಕದ ಚರಿತ್ರೆ ಕಣ್ಣು ಹಾಯಿಸಿದಾಗ ಮಯೂರ ವರ್ಮ, ಇಮ್ಮಡಿ ಪುಲಕೇಶಿ, ಅಮೋಘವರ್ಷ, ನೃಪತುಂಗಾ, ವಿಕ್ರಮಾದಿತ್ಯ, ಶ್ರೀಕೃಷ್ಣದೇವರಾಯ, ಮದಕರಿನಾಯಕ, ಸುರಪುರದ ಅರಸು ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರು ಇತಿಹಾಸ ಪುರುಷರಾಗಿದ್ದಾರೆ. ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳವಳಿ ಗಮನಿಸಿದರೆ, ಕಿತ್ತೂರು ರಾಣಿ ಚನ್ನಮ್ಮ, ಮೈಸೂರು ಅರಸ ಟಿಪ್ಪು ಸುಲ್ತಾನ್‌ಗೆ ಸಿಕ್ಕಷ್ಟು ಪ್ರಾಶಸ್ತ್ಯ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರಿಗೆ ದೊರೆಯಲಿಲ್ಲ. ಇದು ಮನಸ್ಸಿಗೆ ನೋವು ತರುತ್ತದೆ. ರಾಣಿ ಈಶ್ವರಮ್ಮ ಮತ್ತು ನಾಲ್ವಡಿ ರಾಜಾ ವೆಂಕಟಪ್ಪ ನಾಯಕರಿಗೆ ಬ್ರಿಟಿಷರು, ನಿಜಾಮರ ದಾಖಲೆಗಳಲ್ಲಿ ದ್ರೋಹ ಎಸಗಿದ್ದಾರೆ ಎಂದು ತಿಳಿಸಿದರು.

ಹಂಪಿ ಕನ್ನಡ ವಿವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ ದಳವಾಯಿ ಅಧ್ಯಕ್ಷತೆ ವಹಿಸಿದ್ದರು.

ರಾಜವಂಶಸ್ಥ ರಾಜಾ ಕೃಷ್ಣಪ್ಪ ನಾಯಕ, ಹಿರಿಯ ನ್ಯಾಯ ವಾದಿ ಶರಣಬಸಪ್ಪ ನಿಷ್ಠಿ, ಹೈಕೋರ್ಟ್ ನ್ಯಾಯವಾದಿ ಸುದರ್ಶನ ಯಾರಾದಿ, ಪ್ರಮುಖರಾದ ಡಾ.ಇಂದುಮತಿ ಪಾಟೀಲ್, ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ, ಡಾ.ಸಂಗನಗೌಡ ಹಿರೇಗೌಡ, ವಕೀಲ ಪತ್ರಕರ್ತ ಟಿ.ನಾಗೇಂದ್ರ, ಡಾ.ಪವನಕುಮಾರ ಜೋಶಿ, ಡಾ.ದಿಗಂಬರ ಬಾಬರೆ, ರಾಜಗೋಪಾಲ ವಿಭೂತಿ ವೇದಿಕೆಯಲ್ಲಿದ್ದರು.

ಸುರಪುರ ಆಳಿದ ಅರಸರು ಸರ್ವ ಶ್ರೇಷ್ಠರು. ಸಗರನಾಡಿನ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿರುವುದನ್ನು ಕಾಣಬಹುದು. ಬ್ರಿಟಿಷರ ವಿರುದ್ಧ ದಂಗೆಯೆದ್ದ ಪಾಳೆಗಾರರಿಗೆ, ಅನ್ಯ ರಾಜ್ಯದ ಅರಸರಿಗೆ ಸಹಕಾರ, ಸಹಾಯ ಮಾಡಿದ್ದಾರೆ. ಸುರಪುರದ ಶ್ರೇಷ್ಠ ಅರಸ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಹೋರಾಟ ಸ್ಮರಣೀಯ.

- ಡಾ.ಅಮರೇಶ ಯಾತಗಲ್, ಹಂಪಿ ವಿಶ್ವ ವಿದ್ಯಾಲಯದ ಶಾಸನ ಶಾಸ್ತ್ರ ವಿಭಾಗದ ಮುಖ್ಯಸ್ಥರು.