ಲಾಲ್‌ಬಾಗ್‌ಗೆ ಟನಲ್‌ನಿಂದ ಧಕ್ಕೆ ಇಲ್ಲ : ಡಿ.ಕೆ. ಶಿವಕುಮಾರ್‌

| N/A | Published : Oct 12 2025, 09:43 AM IST

DK Shivakumar

ಸಾರಾಂಶ

ಸುರಂಗ ರಸ್ತೆ ಯೋಜನೆಯಿಂದ ಲಾಲ್‌ಬಾಗ್‌ಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಿ, ಕಟ್ಟಡ ನಿರ್ಮಾಣ ಪರವಾನಗಿ, ಸ್ವಾಧೀನಾನುಭವ ಪ್ರಮಾಣ ಪತ್ರದ ಸಮಸ್ಯೆ ಪರಿಹರಿಸಿ, ಕಸ ಸಂಗ್ರಹ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ

  ಬೆಂಗಳೂರು:  ಸುರಂಗ ರಸ್ತೆ ಯೋಜನೆಯಿಂದ ಲಾಲ್‌ಬಾಗ್‌ಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಿ, ಕಟ್ಟಡ ನಿರ್ಮಾಣ ಪರವಾನಗಿ, ಸ್ವಾಧೀನಾನುಭವ ಪ್ರಮಾಣ ಪತ್ರದ ಸಮಸ್ಯೆ ಪರಿಹರಿಸಿ, ಕಸ ಸಂಗ್ರಹ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಲಾಲ್‌ ಬಾಗ್‌ನಲ್ಲಿ 200ಕ್ಕೂ ಅಧಿಕ ಬೀದಿ ನಾಯಿಗಳಿದ್ದು, ನಾಯಿ ಕಚ್ಚುವ ಪ್ರಕರಣ ಹೆಚ್ಚಳ ಸೇರಿದಂತೆ ಹತ್ತು ಹಲವು ವಿಷಯದ ಕುರಿತು ಸಾರ್ವಜನಿಕರಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಹವಾಲು ಸ್ವೀಕರಿಸಿದರು.

ಶನಿವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಗರದ ಲಾಲ್‌ ಬಾಗ್‌ ಉದ್ಯಾನವನದಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಲಾಲ್‌ಬಾಗ್‌ನಲ್ಲಿ ನಡೆಯುತ್ತಾ ಸಾರ್ವಜನಿಕರಿಂದ ಅಹವಾಲು, ಸಲಹೆ ಹಾಗೂ ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಹಿರಿಯ ನಾಗರಿಕ ಆರ್.ಸಿ. ಜಗನ್ನಾಥ್ ಎಂಬುವವರು, ಲಾಲ್ ಬಾಗ್ ನಲ್ಲಿ ಯಾವುದೇ ಯೋಜನೆ ಕೈಗೊಳ್ಳಬೇಡಿ. ಲಾಲ್‌ ಬಾಗ್‌ಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್‌, ಯಾವುದೇ ಕಾರಣಕ್ಕೂ ಲಾಲ್ ಬಾಗ್ ಗೆ ಧಕ್ಕೆ ಆಗುವುದಿಲ್ಲ. ಅಗತ್ಯವಿದ್ದರೆ ಟನಲ್‌ ಯೋಜನೆಯಲ್ಲಿ ಮಾರ್ಪಾಡು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕಾರ್ತಿಕ್ ಕುಮಾರ್ ಎಂಬುವರು, ಸರ್ಕಾರ ಏನೇ ಕೆಲಸ ಮಾಡಿದರೂ ಜನರಲ್ಲಿ ನಾಗರಿಕ ಪ್ರಜ್ಞೆ ಮೂಡದಿದ್ದರೆ ಯಶಸ್ವಿಯಾಗುವುದಿಲ್ಲ. ಹೀಗಾಗಿ, ಇದಕ್ಕೆ ಅಗತ್ಯ ಜಾಗೃತಿ ಮೂಡಿಸುವ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದರು.

ನಗರದ ಕೇಂದ್ರ ಭಾಗದಲ್ಲಿರುವ ಶಾಲೆಗಳ ಆವರಣದಲ್ಲಿ ಜಾಗವಿದ್ದರೂ ರಸ್ತೆಯಲ್ಲಿ ವಾಹನ ನಿಲ್ಲಿಸುತ್ತಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚುತ್ತದೆ, ಈ ಶಾಲೆಗಳು ತಮ್ಮ ಆವರಣದಲ್ಲಿ ವಾಹನ ಇಟ್ಟುಕೊಳ್ಳುವಂತೆ ಸೂಚಿಸಿ ಎಂದು ಮನವಿ ಮಾಡಿದರು. ಅದಕ್ಕೆ ಈ ವಿಚಾರವಾಗಿ ಖಂಡಿತ ಆಲೋಚನೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಒಸಿ,ಸಿಸಿ ವಿನಾಯಿತಿ ನೀಡಿ;

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಸಿ ಮತ್ತು ಸಿಸಿ ಸಮಸ್ಯೆ ಇದೆ. 40*60 ನಿವೇಶನದಲ್ಲಿ ಮನೆ ಕಟ್ಟುತ್ತಿದ್ದೇವೆ ಎಂದು ಒಸಿ,ಸಿಸಿ ವಿನಾಯಿತಿ ನೀಡಿ ಎಂದು ಮನವಿ ಮಾಡಿದರು. ಶುಕ್ರವಾರವಷ್ಟೇ 30*40 ನಿವೇಶನಕ್ಕೆ ವಿನಾಯಿತಿ ನೀಡಿದ್ದೇವೆ. ಉಳಿದಂತೆ ಎರಡನೇ ಹಂತದಲ್ಲಿ ಇತರೆ ಕಟ್ಟಡಗಳ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ರಾಜಾರಾಂ ಎಂಬುವವರು, ನಗರದಲ್ಲಿ ಮೆಟ್ರೋ ಅಥವಾ ಇತರೆ ಕಾಮಗಾರಿ ಕೈಗೊಂಡ ಆರಂಭದಿಂದ ಮುಕ್ತಾಯದವರೆಗೆ ಸಂಬಂಧಪಟ್ಟ ಗುತ್ತಿಗೆದಾರರು ನಿರ್ವಹಣೆ ಮಾಡುವಂತೆ ಮಾಡಿ. ಆಗ ರಸ್ತೆ ಗುಂಡಿ ಸೇರಿದಂತೆ ಅರ್ಧದಷ್ಟು ಸಮಸ್ಯೆ ನಿವಾರಣೆ ಆಗಲಿದೆ ಎಂದು ಸಲಹೆ ನೀಡಿದರು.

ಈ ವೇಳೆ ವಿದ್ಯುತ್‌ ದೀಪ, ರಸ್ತೆ ಕೆಟ್ಟು ಹೋಗಿದೆ, ಶಾಲೆ ಮುಂದಿನ ರಸ್ತೆಯಲ್ಲಿ ಕಸ ಹಾಕುತ್ತಾರೆ ಸೇರಿದಂತೆ ಮೊದಲಾದ ದೂರುಗಳನ್ನು ಸಾರ್ವಜನಿಕರು ಡಿ.ಕೆ.ಶಿವಕುಮಾರ್‌ ಗಮನಕ್ಕೆ ತಂದರು. ಅಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸುವಂತೆ ಸ್ಥಳದಲ್ಲಿಯೇ ನಿರ್ದೇಶಿಸಿದರು.

ಈ ವೇಳೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್, ಅಪರ ಆಯುಕ್ತ ದಲ್ಜೀತ್ ಕುಮಾರ್, ಜಂಟಿ ಆಯುಕ್ತರಾದ ರಂಗನಾಥ್, ಹೇಮಂತ್, ಲಾಲ್ ಬಾಗ್ ನಿರ್ದೇಶಕ ಗಿರೀಶ್‌ ಉಪಸ್ಥಿತರಿದ್ದರು.

ಲಾಲ್‌ಬಾಗ್‌ನಲ್ಲಿ ಬೀದಿ ನಾಯಿ ಕಾಟ

ಲಾಲ್‌ಬಾಗ್‌ನಲ್ಲಿ ಸುಮಾರು 200ಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಜನರು ಓಡಾಟ ನಡೆಸುವುದೇ ಕಷ್ಟವಾಗಿದೆ. ಮಕ್ಕಳಿಗೆ ನಾಯಿ ಕಚ್ಚುವ ಪ್ರಕರಣ ಹೆಚ್ಚಾಗಿವೆ ಎಂದು ಸಾರ್ವಜನಿಕರು ದೂರಿದರು. ಅದಕ್ಕೆ ಪ್ರಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಬೀದಿ ನಾಯಿಗಳನ್ನು ಒಂದು ಸ್ಥಳದಲ್ಲಿ ಕೂಡಿ ಹಾಕಿ, ಆಹಾರ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಮತ್ತಿಕೆರೆಯ ಜೆ.ಪಿ.ಪಾರ್ಕ್‌ನಲ್ಲಿ ನಡಿಗೆ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಮ್ಮಿಕೊಂಡಿರುವ ಬೆಂಗಳೂರು ನಡಿಗೆ ಕಾರ್ಯಕ್ರಮ ಭಾನುವಾರ ಮತ್ತಿಕೆರೆಯ ಜೆ.ಪಿ.ಪಾರ್ಕ್‌ನಲ್ಲಿ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಉಪ ಮುಖ್ಯಮಂತ್ರಿ ಅಧಿಕಾರಿಗಳೊಂದಿಗೆ ಪಾರ್ಕ್‌ನಲ್ಲಿ ಸಾರ್ವಜನಿಕರ ಅಹವಾಲು, ಸಲಹೆ ಸ್ವೀಕರಿಸಲಿದ್ದಾರೆ. 

 .ಲಾಲ್‌ಬಾಗ್‌ ಅಬಿವೃದ್ಧಿಗೆ 10 ಕೋಟಿ ಅನುದಾನ:ಡಿಸಿಎಂ 

ಬೆಂಗಳೂರು :  ಸಾರ್ವಜನಿಕರು ಬಯಸಿದಂತೆ ಲಾಲ್ ಬಾಗ್ ಅಭಿವೃದ್ಧಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಿಂದ 10 ಕೋಟಿ ರು. ಅನುದಾನ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಸಲಹೆ, ದೂರು ಆಲಿಸಿದ್ದೇನೆ, ಸಮಸ್ಯೆ ಬಗೆಹರಿಸಲಾಗುವುದು. ಲಾಲ್ ಬಾಗ್ ಅಭಿವೃದ್ಧಿಗೆ ಜಿಬಿಎಯಿಂದ 10 ಕೋಟಿ ರು. ಅನುದಾನ ನೀಡಲು ತೀರ್ಮಾನಿಸಿದ್ದೇವೆ. ಹಿರಿಯರು ಹಾಗೂ ಮಹಿಳೆಯರಿಗೆ ಅನುಕೂಲವಾಗುವಂತೆ ಜಿಮ್ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಟ್ರೀ ಪಾರ್ಕ್: ಬೆಂಗಳೂರಿನಲ್ಲಿ ಅವಕಾಶ ಇರುವೆಡೆ ಲಾಲ್ ಬಾಗ್ ಮಾದರಿಯಲ್ಲಿ ಟ್ರೀ ಪಾರ್ಕ್ ಮಾಡಲು ಅರಣ್ಯ ಇಲಾಖೆ ಜತೆ ಚರ್ಚೆ ಮಾಡುತ್ತೇನೆ. ಅದಕ್ಕೆ ಆರ್ಥಿಕ ಬೆಂಬಲವನ್ನು ನೀಡಲಾಗುವುದು. ಲಾಲ್‌ಬಾಗ್‌ನಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ವೈದ್ಯರು ಹಾಗೂ ಆಂಬ್ಯುಲೆನ್ಸ್ ಸೇವೆ ನಿಯೋಜನೆಗೆ ತೀರ್ಮಾನಿಸಿದ್ದೇವೆ. ಶೌಚಾಲಯಗಳ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುವುದು. ಬೆಂಗಳೂರಿನ ಕಸ ವಿಲೇವಾರಿ, ವಾಹನ ನಿಲುಗಡೆ ಸೇರಿದಂತೆ ಅನೇಕ ವಿಚಾರವಾಗಿ ಸಲಹೆ, ಅಭಿಪ್ರಾಯಗಳು ಬಂದಿವೆ ಎಂದು ತಿಳಿಸಿದರು.

ಟನಲ್‌ಗೆ 6 ಎಕ್ರೆ ಬೇಡ, ಅರ್ಧ ಎಕ್ರೆ ಸಾಕು; ಲಾಲ್ ಬಾಗ್ ಸಾರ್ವಜನಿಕರ ಆಸ್ತಿ. ಈ ಆಸ್ತಿ ಉಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇವೆ. ಟನಲ್‌ ರಸ್ತೆಗೆ ಲಾಲ್‌ಬಾಗ್‌ನ ಆರು ಎಕರೆ ಭೂಮಿ ವಶಪಡಿಸಿಕೊಳ್ಳುವ ಅಗತ್ಯವಿಲ್ಲ. ಅರ್ಧ ಎಕರೆ ಪ್ರದೇಶದಲ್ಲಿ ಅಶೋಕ ಪಿಲ್ಲರ್ ಕಡೆ ಟನಲ್ ರಸ್ತೆಗೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗುವುದು. ಪಾರ್ಕಿಂಗ್ ಇರುವ ಜಾಗದಲ್ಲಿ ಸುಮಾರು ಒಂದು ಎಕರೆ ಜಾಗವನ್ನು ಸ್ಟೋರೇಜ್ ಗೆ ಬಳಸಿಕೊಳ್ಳುತ್ತೇವೆ. ನಂತರ ಅದನ್ನು ತೆರವುಗೊಳಿಸಿ ಲಾಲ್ ಬಾಗ್ ಗೆ ಕೊಡುತ್ತೇವೆ. ಸಣ್ಣದಾಗಿರುವ ಗಿಡಗಳನ್ನು ತೆರವುಗೊಳಿಸಿ, ಮತ್ತೆ ಗಿಡ ನೆಡುತ್ತೇವೆ. ಉಳಿದಂತೆ ಲಾಲ್ ಬಾಗ್ ಉದ್ಯಾನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಮುಂದಿನ ದಿನಗಳಲ್ಲೂ ಉದ್ಯಾನಗಳಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮ ನಡೆಸಿ ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯ, ಸಲಹೆ, ಅಹವಾಲು ಆಲಿಸಲಾಗುವುದು ಎಂದು ತಿಳಿಸಿದರು.

Read more Articles on