ಶಾಲಿನಿ ರಜನೀಶ್‌ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ : ಹಾಲಿ ಸಿಎಸ್‌ ರಜನೀಶ್‌ ಪತ್ನಿಗೆ ಮಹತ್ವದ ಹುದ್ದೆ

| Published : Jul 27 2024, 12:11 PM IST

Shalini Rajaneesh
ಶಾಲಿನಿ ರಜನೀಶ್‌ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ : ಹಾಲಿ ಸಿಎಸ್‌ ರಜನೀಶ್‌ ಪತ್ನಿಗೆ ಮಹತ್ವದ ಹುದ್ದೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ರಜನೀಶ್‌ ಗೋಯೆಲ್‌ ಅವರು ಜುಲೈ 31ರಂದು ನಿವೃತ್ತಿಯಾಗಲಿದ್ದು, ರಜನೀಶ್‌ ಪತ್ನಿ ಶಾಲಿನಿ ರಜನೀಶ್‌ ಅವರೇ ಪತಿಯ ಹುದ್ದೆ ಅಲಂಕರಿಸಲಿದ್ದಾರೆ.

ಬೆಂಗಳೂರು :  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ರಜನೀಶ್‌ ಗೋಯೆಲ್‌ ಅವರು ಜುಲೈ 31ರಂದು ನಿವೃತ್ತಿಯಾಗಲಿದ್ದು, ರಜನೀಶ್‌ ಪತ್ನಿ ಶಾಲಿನಿ ರಜನೀಶ್‌ ಅವರೇ ಪತಿಯ ಹುದ್ದೆ ಅಲಂಕರಿಸಲಿದ್ದಾರೆ.

ರಾಜ್ಯದ 41ನೇ ಹಾಗೂ 5ನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್‌ ಅವರನ್ನು ನೇಮಕ ಮಾಡಲು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಆ.1ರಿಂದ ಅನ್ವಯವಾಗುವಂತೆ ಶಾಲಿನಿ ರಜನೀಶ್‌ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಆಗಿ ಪತಿಯಿಂದ ಕಾರ್ಯಭಾರ ವಹಿಸಿಕೊಳ್ಳಲಿದ್ದಾರೆ. ತನ್ಮೂಲಕ ಎರಡನೇ ಬಾರಿಗೆ ಪತಿ ಹಾಗೂ ಪತ್ನಿ ಒಬ್ಬರ ಹಿಂದೆ ಒಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗುತ್ತಿದ್ದಾರೆ.

ಈ ಹಿಂದೆ ಮುಖ್ಯ ಕಾರ್ಯದರ್ಶಿಯಾಗಿದ್ದ ಬಿ.ಕೆ. ಭಟ್ಟಾಚಾರ್ಯ ಅವರು ನಿವೃತ್ತಿ ಹೊಂದಿದ ಬಳಿಕ ತೆರೆಸಾ ಭಟ್ಟಾಚಾರ್ಯ ಅವರು 2001ರ ಜುಲೈ 2ರಿಂದ 2002ರ ಮಾ.30ರವವರೆಗೆ ಮುಖ್ಯಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು.

ಶಾಲಿನಿ ರಜನೀಶ್‌ ಅವರು 1989ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದು ಪ್ರಸ್ತುತ ಅಭಿವೃದ್ಧಿ ಆಯುಕ್ತೆ ಹಾಗೂ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆ.1ರಿಂದ 3 ವರ್ಷಗಳವರೆಗೆ ಅವರು ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಂಪುಟ ಸಭೆಯಲ್ಲಿ ರಜನೀಶ್‌ಗೆ ಬೀಳ್ಕೊಡುಗೆ:

ಕಳೆದ ಎಂಟು ತಿಂಗಳಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ರಜನೀಶ್‌ ಗೋಯೆಲ್ ಅವರಿಗೆ ಶುಕ್ರವಾರ ನಡೆದ ಸಚಿವ ಸಂಪುಟ ಕೊನೆಯದಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಬೀಳ್ಕೊಡುಗೆ ನೀಡಲಾಯಿತು.