ಸಾರಾಂಶ
-ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಡಾ. ಪ್ರಕಾಶ ಪಾಟೀಲ್ ಮಾತು । ಘಾಟಬೋರಳದಲ್ಲಿ ಹೊಸ ವಿದ್ಯಾರ್ಥಿಗಳ ಸ್ವಾಗತ, ಬಿಳ್ಕೋಡುಗೆ
-----ಕನ್ನಡಪ್ರಭ ವಾರ್ತೆ, ಹುಮನಾಬಾದ್
ಕಾಲೇಜಿನಲ್ಲಿದ್ದಾಗ ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಮಾಜಿ ಜಿ.ಪಂ ಅಧ್ಯಕ್ಷ ಡಾ. ಪ್ರಕಾಶ ಪಾಟೀಲ್ ಹೇಳಿದರು.ಅವರು ತಾಲೂಕಿನ ಘಾಟಬೋರಳ ಗ್ರಾಮದಲ್ಲಿ ಕಂಟು ನಾಯಕ ಎಜುಕೇಷನಲ್ ಮತ್ತು ಚಾರಿಟೆಬಲ್ ಟ್ರಸ್ಟ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಮಾಲನಬಾಯಿ ಜಾಧವ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಬಿಎ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೋಳ್ಕೊಡುಗೆ, ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ನೆರವೆರಿಸಿ ಮಾತನಾಡಿದ ಅವರು. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರ, ಸಾಮಾನ್ಯ ಜ್ಞಾನ ಹಾಗೂ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶವನ್ನು ಕಟ್ಟುವ ಕೆಲಸದಲ್ಲಿ ಸಹಕಾರಿಯಾದಲ್ಲಿ ಮಾತ್ರ ವಿದ್ಯಾರ್ಥಿಗಳು ಪಡೆದಂತಹ ಪದವಿಗಳಿಗೆ ಇನ್ನೂ ಹೆಚ್ಚಿನ ಮೆರಗು ಸಿಗಲಿದೆ, ಈ ನಿಟ್ಟಿನಲ್ಲಿ ಶಿಕ್ಷಣದ ನಂತರ ಒಳ್ಳೆಯ ಅವಕಾಶಗಳಿದ್ದು ಅವುಗಳನ್ನು ಪಡೆದುಕೊಂಡು ಸುಂದರ ಬದುಕು ಕಟ್ಟಿಕೊಳ್ಳುವಂತೆ ಕರೆ ನೀಡಿದರು.
ಮಾಜಿ ಗ್ರಾ.ಪಂ.ಅಧ್ಯಕ್ಷ ರಾಜಕುಮಾರ ಪಾಟೀಲ್ ಮಾತನಾಡಿ, ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಶಿಕ್ಷಣ ದೊರೆಯುತ್ತಿದ್ದು, ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ, ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಓದಿನ ಕಡೆ ಗಮನ ಹರಿಸಬೇಕು. ದುಶ್ಚಟಗಳಿಂದ ದೂರವಿರಿ, ನಿಮ್ಮ ಆರೊಗ್ಯದ ಕಡೆ ಗಮನಹರಿಸಿ. ಶಿಕ್ಷಣದೊಂದಿಗೆ ವೃತ್ತಿ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳಸಿಕೊಂಡು ಅಭಿವೃದ್ಧಿ ಹೊಂದಿ ಸಾಧನೆಯ ಪಥದತ್ತ ಸಾಗಬೇಕೆಂದರು.ನಿವೃತ ಮುಖ್ಯೋಪಾಧ್ಯಾಯ ಎಸ್.ವಿ ಘಾಳೆ ಮಾತನಾಡಿ, ವಿದ್ಯಾರ್ಥಿಗಳು ಮಹಾವಿದ್ಯಾಲಯದಲ್ಲಿ ದೊರೆಯುವ ಅವಕಾಶ ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿ ಬದುಕು ನಡೆಸಬೇಕು. ಸ್ಪರ್ಧಾತ್ಮಕ ಹಾಗೂ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಸಂವಹನ ಕೌಶಲ ಬೆಳೆಸಿಕೊಂಡು ಭವಿಷ್ಯತ್ವದ ನಾಗರಿಕರಾಗಿ ರೂಪಗೊಳ್ಳುವ ಮೂಲಕ ಸ್ವಯಂ ಉದ್ಯೋಗದತ್ತ ಆಸಕ್ತಿ ವಹಿಸಿಕೊಳ್ಳಬೇಕೆಂದರು.
ಉಪನ್ಯಾಸಕ ಭೀಮರಾವ ಕುಲ್ಕರ್ಣಿ ಮಾತನಾಡಿ, ಯುವಕರು ಸೂಕ್ತ ನಿರ್ಣಯ ಕೈಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ತಮ್ಮ ಬದುಕಿನ ಪ್ರತಿ ಕ್ಷಣವೂ ನಿರ್ಣಾಯಕವಾಗಿದೆ. ಶಿಕ್ಷಣವನ್ನು ಬದುಕಿನ ಭಾಗವನ್ನಾಗಿ ಮಾಡಿಕೊಳ್ಳುವ ಮೂಲಕ ದೇಶದ ಒಬ್ಬ ಜವಾಬ್ಧಾರಿಯುತ ನಾಗರಿಕರಾಗಿ ಹೊರಹೊಮ್ಮುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಸಂಸ್ಥೆಯ ಆಡಳಿತಾಧಿಕಾರಿ ವೆಂಕಟೇಶ ಜಾಧವ ಮಾತನಾಡಿ. ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವುದು ನಿಮ್ಮೆಲ್ಲರ ಭಾಗ್ಯ, ಏಕೆಂದರೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ಸಂಸ್ಕಾರ, ಸಾಮರಸ್ಯದ ಜೀವನದ ಅಂಶಗಳನ್ನು ವಿದ್ಯಾರ್ಥಿಗಳಿಗೆ ಮೈಗೂಡಿಸಿಕೊಳ್ಳುವಂತೆ ಮಾಡುತ್ತದೆ. ಹಾಗಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಕನಸನ್ನು ನನಸಾಗಲು ಬೆನ್ನೆಲುಬಾಗಿ ನಿಲ್ಲುತ್ತದೆ ಎಂದರು.
ಗ್ರಾ.ಪಂ ಅಧ್ಯಕ್ಷೆ ಪ್ರಭಾವತಿ ಘಂಟೆ, ಉಪಾಧ್ಯಕ್ಷೆ ರಂಜೀತ ಮಾನಕರೆ, ಹಾಸ್ಯ ಕಲಾವಿದ ನಿಲಕಂಠಯ್ಯ ಆರ್ ಮರಿದೇವರಮಠ, ಸುಧಾಕರ ಮುಳೆ, ಲಕ್ಷ್ಮಣ ಹೆಂಬಾಣಿ, ಮಾಧವ ಗಣೇಶ, ಡಾ. ಶಿವಕುಮಾರ ಗಣೇಶ, ರಮೇಶ ಜಾಧವ, ಬಾಬು ಜಾಧವ ಇದ್ದರು,----
ಚಿತ್ರ 10ಬಿಡಿಆರ್55ಹುಮನಾಬಾದ್ ತಾಲೂಕಿನ ಘಾಟಬೋರಳ ಗ್ರಾಮದ ಪದವಿ ಕಾಲೇಜಿನಲ್ಲಿ ಬಿಎ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ. ಪ್ರಕಾಶ ಪಾಟೀಲ್ ಮಾತನಾಡಿದರು.
--