ಮಳೆಯ ನಡುವೆಯೂ ಕಳೆಗಟ್ಟಿದ ದಸರಾ ಉತ್ಸವ

| Published : Oct 11 2024, 11:52 PM IST

ಸಾರಾಂಶ

ಶೃಂಗೇರಿ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವದ ಆರಂಭದಿಂದಲೂ ಸುರಿಯುತ್ತಿರುವ ಮಳೆ ಗುರುವಾರವೂ ಮತ್ತೆ ಎಂದಿನಂತೆ ಅಬ್ಬರಿಸಿತು. ಆದರೆ ಭಕ್ತರ ಸಂಖ್ಯೆ ಮಾತ್ರ ಕ್ಷೀಣಿಸಿರಲಿಲ್ಲ. ಶ್ರೀ ಮಠದ ಆವರಣ, ಶ್ರೀ ಶಾರದಾಂಬಾ ದೇವಾಲಯ ಸಹಿತ ಎಲ್ಲೆಡೆ ಭಕ್ತರ ದಂಡೇ ನೆರೆದಿತ್ತು.

- ರಾಜರಾಜೇಶ್ವರಿ ಅಲಂಕಾರದಲ್ಲಿ ರಾರಾಜಿಸಿದ ಅಧಿದೇವತೆ ಶಾರದೆ। ವಿವಿಧೆಡೆಗಳಿಂದ ಹರಿದು ಬರುತ್ತಿರುವ ಭಕ್ತಸಾಗರ.

ಕನ್ನಡಪ್ರಭ ವಾರ್ತೆ, ಶೃಂಗೇರಿ

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವದ ಆರಂಭದಿಂದಲೂ ಸುರಿಯುತ್ತಿರುವ ಮಳೆ ಗುರುವಾರವೂ ಮತ್ತೆ ಎಂದಿನಂತೆ ಅಬ್ಬರಿಸಿತು. ಆದರೆ ಭಕ್ತರ ಸಂಖ್ಯೆ ಮಾತ್ರ ಕ್ಷೀಣಿಸಿರಲಿಲ್ಲ. ಶ್ರೀ ಮಠದ ಆವರಣ, ಶ್ರೀ ಶಾರದಾಂಬಾ ದೇವಾಲಯ ಸಹಿತ ಎಲ್ಲೆಡೆ ಭಕ್ತರ ದಂಡೇ ನೆರೆದಿತ್ತು.

ನವರಾತ್ರಿ ಎಂಟನೇ ದಿನವಾದ ಗುರುವಾರ ಶಾರದೆಗೆ ರಾಜರಾಜೇಶ್ವರಿ ಅಲಂಕಾರ ಮಾಡಲಾಗಿತ್ತು. ಶ್ರೀ ಶಾರದಾಂಬೆಗೆ ವಿಶೇಷ ಅಲಂಕಾರ ಸಹಿತ ನವರಾತ್ರಿ ವಿಶೇಷ ಪೂಜೆ. ಮಹಾಮಂಗಳಾರತಿ ಜತೆಗೆ ಶ್ರೀಮಠ ಆವರಣದ ಎಲ್ಲಾ ದೇವಾಲಯಗಳಲ್ಲಿ ನವರಾತ್ರಿ ಪೂಜೆ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳಲ್ಲಿ ಸೂತಸಂಹಿತೆ, ಲಕ್ಷ್ಮಿ ನಾರಾಯಣ ಹೃದಯ, ದುರ್ಗಾಸಪ್ತಶತಿ ಪಾರಾಯಣ ನೆರವೇರಿದವು. ಶ್ರೀ ಚಕ್ರಕ್ಕೆ ನವಾವರಣ, ಸುವಾಸಿನಿ ಹಾಗೂ ಕುಮಾರಿ ಪೂಜೆ ನೆರವೇರಿತು. ಶಾರದಾಂಬೆ ಸನ್ನಿದಿಯಲ್ಲಿ ಜಗದ್ಗುರು ವಿಶೇಷ ಪೂಜೆ ಸಲ್ಲಿಸಿದರು.

ಪುರಾಣ ಇತಿಹಾಸಗಳ ಪ್ರಕಾರ ಶೃಂಗೇರಿ ಪರಶಿವನು ಸಂಚರಿಸಿದ ಸ್ಥಳ. ಆತ ಸತತ ನೆಲೆ ನಿಂತ ಬೆಟ್ಟದಲ್ಲಿ ಮಲಹಾನಿಕರೇಶ್ವರ ಮಂದಿರವಿದೆ. ಮಹರ್ಷಿ ವಿಭಾಂಡಕ ಮುನಿಗಳು ತಪಸ್ಸು ಆಚರಿಸಿ ಲೋಕಕಲ್ಯಾಣ ಕೈಗೊಂಡು ಶಿವೈಕ್ಯರಾದ ಪುಣ್ಯ ಸ್ಥಳವಿದು. ಕಳೆದ 6 ಶತಮಾನಗಳಿಂದ ಶಾಸ್ತ್ರ ಸಂಪ್ರದಾಯಗಳಿಗೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ಪೂರ್ವ ಪರಂಪರೆಯಂತೆ ನವರಾತ್ರಿ ದರ್ಬಾರ್, ಅಮ್ಮನವರ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಶಾರದಾಂಬೆ ಸನ್ನಿದಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದರೆ ಮಕ್ಕಳು ವಿದ್ಯಾಸಂಪನ್ನರಾಗುತ್ತಾರೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆಗಳಿಂದ ಬರುವ ಭಕ್ತಾದಿಗಳು ನವರಾತ್ರಿ ಸಂದರ್ಭದಲ್ಲಿ ಮಕ್ಕಳನ್ನು ಕರೆತಂದು ಅಕ್ಷರಭ್ಯಾಸ ಮಾಡಿಸುತ್ತಾರೆ.

ಪ್ರತಿದಿನದ ರಾಜಬೀದಿ ಉತ್ಸವ ದಿನೇ ದಿನೆ ವಿಶೇಷ ಮೆರಗು ನೀಡುತ್ತಿದ್ದು ತಾಲೂಕಿನ 9 ಗ್ರಾಪಂಗಳ ಗ್ರಾಮಸ್ಥರು ದಿನಕ್ಕೊಂದು ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಪಾಲ್ಗೊಳ್ಳುತ್ತಾರೆ. ಇವರೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಶ್ರೀಮಠದ ಛತ್ರಿ ,ಚಾಮರ, ಆನೆ, ಕುದುರೆಗಳು, ವಿವಿಧ ಭಜನಾ ಮಂಡಳಿ,ಜಾನಪದ ಕಲಾತಂಡ, ವಾದ್ಯ, ವೇದಘೋಷಗಳು, ವಿವಿಧ ಸ್ತಬ್ದಚಿತ್ರಗಳು ರಾಜಬೀದಿ ಉತ್ಸವಕ್ಕೆ ವಿಶೇಷ ಮೆರಗು ನೀಡುತ್ತಿವೆ. ಗುರುವಾರದ ರಾಜಬೀದಿ ಉತ್ಸವದಲ್ಲಿ ಬೇಗಾರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಶ್ರೀ ಮಠದ ಪ್ರವಚನ ಮಂದಿರದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮಹೋತ್ಸವದಲ್ಲಿ ಜ್ಞಾನೋದಯ ಶಾಲಾ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ನಡೆಯಿತು.

ಶುಕ್ರವಾರ ಶಾರದೆಗೆ ಸಿಂಹ ವಾಹಿನಿ ಅಲಂಕಾರ ನಡೆಯಲಿದೆ. ಮಹಾನವಮಿ, ಶತಚಂಡೀಯಾಗದ ಪೂರ್ಣಾಹುತಿ, ಶ್ರೀಮಠದಲ್ಲಿ ಗಜಾಶ್ವಪೂಜೆ ನೆರವೇರಲಿದೆ. ರಾಜಬೀದಿ ಉತ್ಸವದಲ್ಲಿ ಮರ್ಕಲ್ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಮಹೋತ್ಸವದಲ್ಲಿ ಡಾ.ವಾಗೀಶ್ ತಂಡದವರಿಂದ ಹಾಡುಗಾರಿಕೆ ನಡೆಯಲಿದೆ.

10 ಶ್ರೀ ಚಿತ್ರ 1-

ಶೃಂಗೇರಿ ನವರಾತ್ರಿಯಲ್ಲಿ ಶಾರದೆಗೆ ಗುರುವಾರ ರಾಜರಾಜೇಶ್ವರಿ ಅಲಂಕಾರ ಮಾಡಲಾಗಿತ್ತು.

10 ಶ್ರೀ ಚಿತ್ರ 2-

ಶೃಂಗೇರಿ ಶಾರದೆಗೆ ನವರಾತ್ರಿಯ ಅಂಗವಾಗಿ ಪೂಜೆ,ಕೈಂಕಾರ್ಯಕ್ಕೆ ವಾದ್ಯಗೋಷ್ಠಿಯೊಂದಿಗೆ ಆನೆಯ ಮೇಲೆ ಮೆರವಣಿಗೆ ಮೂಲಕ ಗಂಗಾಜಲ ತರುತ್ತಿರುವುದು.