ಅಳ್ವೆಕೋಡಿಯ ಷೋಡಶ ನಾಗಮಂಡಲೋತ್ಸವಕ್ಕೆ ಭಕ್ತಸಾಗರ

| Published : Mar 22 2024, 01:01 AM IST

ಸಾರಾಂಶ

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ವರೆಗೂ ನಾಗಮಂಡಲೋತ್ಸವ ನಡೆಯಿತು.

ಭಟ್ಕಳ: ತಾಲೂಕಿನ ಅಳ್ವೆಕೋಡಿಯ ಆರ್ಕಟಿಮನೆಯ ವಿಶ್ವಶಕ್ತಿ ದೇವಸ್ಥಾನದಲ್ಲಿ ದೇವಿದಾಸ ಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡ ಷೋಡಶ ಪವಿತ್ರ ನಾಗಮಂಡಲೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು, ಒಂದು ವಾರದಿಂದ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯಿತು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅಳ್ವೆಕೋಡಿಯಲ್ಲಿ ಷೋಡಶ ನಾಗಮಂಡಲ ನಡೆದಿದ್ದು, ತಂಡೋಪತಂಡವಾಗಿ ಭಕ್ತರು ಅಳ್ವೆಕೋಡಿಗೆ ಹರಿದು ಬಂದಿದ್ದರು. ವಿಶ್ವಶಕ್ತಿ ದೇವಸ್ಥಾನದ ಎದುರಿನಲ್ಲಿ ಭವ್ಯವಾದ ವೇದಿಕೆ ನಿರ್ಮಿಸಿ ನಾಗಮಂಡಲಕ್ಕೆ ಮಂಟಪ ಸ್ಥಾಪಿಸಲಾಗಿತ್ತು. ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ವರೆಗೂ ನಾಗಮಂಡಲೋತ್ಸವ ನಡೆಯಿತು. ಷೋಡಶ ನಾಗಮಂಡಲಕ್ಕೆ ಅಗತ್ಯವಾಗಿರುವ 10 ಸಾವಿರಕ್ಕೂ ಅಧಿಕ ಅಡಕೆ ಸಿಂಗಾರದ ಗೊನೆಯನ್ನು ಭಟ್ಕಳ ಸೇರಿದಂತೆ ವಿವಿಧ ಭಾಗಗಳಿಂದ ತರಲಾಗಿತ್ತು. ನಾಗಮಂಟಪ ಆಕರ್ಷಕವಾಗಿ ನಿರ್ಮಿಸಲಾಗಿತ್ತು.ಈಗಾಗಲೇ ವಿಶ್ವ ಶಕ್ತಿ ದೇವಸ್ಥಾನದಲ್ಲಿ ಮತ್ತು ನಾಗದೇವರ ಸನ್ನಿಧಿಯಲ್ಲಿ ವೇ ಮೂ. ನಾಗರಾಜ ಪುತ್ರಾಯ, ಮುರಳೀಧರ ಪುತ್ರಾಯ, ಲಕ್ಷ್ಮೀಪ್ರಸಾದ ಭಟ್ ಸಂತ್ಯಾರು ಅವರ ಆಚಾರ್ಯತ್ವದಲ್ಲಿ ಮತ್ತು ಕುಮಾರ ಶಾಸ್ತ್ರಿ ಅವರ ಸಹಭಾಗಿತ್ವದಲ್ಲಿ ಹೋಮ-ಹವನಗಳು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ನಾಗಮಂಡಲ ಪ್ರಯುಕ್ತ ಗುರುವಾರ ಬೆಳಗ್ಗೆ ನಾಗದೇವರಿಗೆ ಪ್ರಧಾನ ಹೋಮ, ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರಾಯಶ್ಚಿತ ಹೋಮ, ದಂಪತಿ ಪೂಜೆ ಹಾಗೂ ಆಚಾರ್ಯ ಪೂಜೆ ನಡೆಸಲಾಯಿತು. ನಾಗಮಂಡಲ ಅಂಗವಾಗಿ ವಿಶ್ವಶಕ್ತಿ ದೇವಸ್ಥಾನದಲ್ಲಿ ಮಾ. 15ರಿಂದ ದಿನಂಪ್ರತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರತಿದಿನ ವಿವಿಧ ಮಠದ ಸ್ವಾಮೀಜಿ ಆಗಮಿಸಿ ಭಕ್ತರಿಗೆ ಆಶೀರ್ವಚನ ನೀಡಿದರೆ, ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು. ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚೂ ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ಆಗಮಿಸುವ ಎಲ್ಲ ಭಕ್ತಾದಿಗಳಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ಕೂಡ ಸಾವಿರಾರು ಭಕ್ತರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಗುರುವಾರ ರಾತ್ರಿ ಸಂಜೆ 7 ಗಂಟೆಗೆ ಶ್ರೀ ನಾಗದೇವರಿಗೆ ಪ್ರಸನ್ನ ಪೂಜೆಯ ನಂತರ ಹಾಲಿಟ್ಟು ಸೇವೆ ನಡೆಸಿ ಷೋಡಶ ಪವಿತ್ರ ನಾಗಮಂಡಲೋತ್ಸವ ಆರಂಭವಾಯಿತು. ನಾಗಪಾತ್ರಿಗಳಾಗಿ ವೇ.ಮೂ. ಶಂಕರನಾರಾಯಣ ಬಾಯರಿ ಗೋಪಾಡಿ, ವೈದ್ಯರಾಗಿ ವಾಸುದೇವ ವೈದ್ಯ ಬಳಗ ಗೋಳಿಅಂಗಡಿ, ಕೃಷ್ಣಪ್ರಸಾದ ಬಳಗ ಮುದ್ದೂರು ಉಪಸ್ಥಿತರಿದ್ದು, ನಾಗಮಂಡಲೋತ್ಸವ ನಡೆಸಿಕೊಟ್ಟರು. ನಾಗಮಂಡಲೋತ್ಸವದ ಯಶಸ್ಸಿಗೆ ಆರ್ಕಟಿಮನೆಯ ನಾರಾಯಣ ಮೊಗೇರ, ಕುಮಾರ ಹೆಬಳೆ, ವಿಠಲ್ ದೈಮನೆ, ಶಂಕರ ಹೆಬಳೆ ಹಾಗೂ ಸ್ವಯಂ ಸೇವಕರು, ಊರ ನಾಗರಿಕರು ಸಹಕರಿಸಿದರು.