ಸಾರಾಂಶ
ಕೃಷಿಯಲ್ಲಿ ಟ್ರ್ಯಾಕ್ಟರ್ ಬಳಕೆ ಕಡಿಮೆ ಮಾಡಿ ಗೋವುಗಳನ್ನು ಬಳಸಬೇಕು. ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು ಮಹಿಳೆಯರು ಪತಿಯೊಂದಿಗೆ ಕೆಲಸಕ್ಕೆ ಸಾಥ್ ನೀಡಬೇಕು. ಕೃಷಿಯಲ್ಲಿ ಉತ್ತಮ ಭವಿಷ್ಯವಿದ್ದು ಇದೀಗ ಎಂಜಿನಿಯರ್‌ಗಳು ಸಹ ದೊಡ್ಡ ದೊಡ್ಡ ಹುದ್ದೆ ಬಿಟ್ಟು ಕೃಷಿಯತ್ತ ಮುಖ ಮಾಡಿದ್ದಾರೆ.
ಕುಕನೂರು:
ಭಕ್ತಿ ಸೇವೆ ಶ್ರೇಷ್ಠ ಕಾಯಕವಾಗಿದೆ ಎಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರರು ಹೇಳಿದರು.ತಾಲೂಕಿನ ರಾಜೂರು ಗ್ರಾಮದಲ್ಲಿ ಜರುಗಿದ ಲಿಂ. ಪಂಚಾಕ್ಷರ ಶಿವಾಚಾರ್ಯರ 5ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಹಾನ್ ಯೋಗಿಗಳು ಕೂಡಾ ಪಡೆದುಕೊಳ್ಳಲು ಆಗದ ಸಿದ್ಧಿಯನ್ನು ಭಕ್ತಿ ಸೇವೆ ಮೂಲಕ ಪಡೆದುಕೊಳ್ಳಬಹುದು ಎಂದರು.
ಗುರುವಿನ ಆಶೀರ್ವಾದದಿಂದ ರಾಜೂರು ರಾಜರ ಊರಾಗಿದೆ ಎಂದ ಕಾಶೀ ಪೀಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಕೃಷಿಯಲ್ಲಿ ಟ್ರ್ಯಾಕ್ಟರ್ ಬಳಕೆ ಕಡಿಮೆ ಮಾಡಿ ಗೋವುಗಳನ್ನು ಬಳಸಬೇಕು. ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು ಮಹಿಳೆಯರು ಪತಿಯೊಂದಿಗೆ ಕೆಲಸಕ್ಕೆ ಸಾಥ್ ನೀಡಬೇಕು. ಕೃಷಿಯಲ್ಲಿ ಉತ್ತಮ ಭವಿಷ್ಯವಿದ್ದು ಇದೀಗ ಎಂಜಿನಿಯರ್‌ಗಳು ಸಹ ದೊಡ್ಡ ದೊಡ್ಡ ಹುದ್ದೆ ಬಿಟ್ಟು ಕೃಷಿಯತ್ತ ಮುಖ ಮಾಡಿದ್ದಾರೆ. ಕೃಷಿಕರು ಹಾಗೂ ಸೈನಿಕರು ದೇಶದ ಆಸ್ತಿಯಾಗಿದ್ದಾರೆ ಎಂದು ಹೇಳಿದರು.ರಾಜೂರಿನ ಶ್ರೀಅಭಿಮನ ಪಂಚಾಕ್ಷರ ಶಿವಾಚಾರ್ಯರು ಮಾತನಾಡಿ, ಲಿಂ. ಪಂಚಾಕ್ಷರ ಶಿವಾಚಾರ್ಯರು ಭಕ್ತರಿಗಾಗಿ ಶ್ರಮಿಸಿದರು. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುತ್ತಿದ್ದೇವೆ. ಇದಕ್ಕೆ ಗ್ರಾಮದ ಭಕ್ತರು ಸಹಕಾರ ನೀಡಿದ್ದಾರೆ. ಗುರು ಕಾರುಣ್ಯದಿಂದ ಬದುಕು ಹಸನವಾಗುತ್ತದೆ ಎಂದು ಹೇಳಿದರು.
ಸುಮಾರು 80 ನಿವೃತ್ತ ಯೋಧರಿಗೆ ಪಂಚಾಕ್ಷರ ಪುತ್ರ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಹರಗುರುಚರಮೂರ್ತಿಗಳು ಹಾಗೂ ಪ್ರಮುಖರಿದ್ದರು.ಅದ್ಧೂರಿ ಅಡ್ಡ ಪಲ್ಲಕ್ಕಿ ಮೆರವಣಿಗೆ:
ರಾಜೂರು ಗ್ರಾಮಕ್ಕೆ ಆಗಮಿಸಿದ ಶ್ರೀಶೈಲ ಹಾಗೂ ಕಾಶೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿ ಅದ್ಧೂರಿಯಿಂದ ಜರುಗಿತು. ಮಹಿಳೆಯರು ಕುಂಭಹೊತ್ತು ಸಾಗಿದರು. ನಾನಾ ವಾದ್ಯಮೇಳ ಮೆರವಣಿಗೆಗೆ ಮೆರಗು ನೀಡಿದವು. ಗ್ರಾಮದ ನೌಕರರು ಹಾಗೂ ನಿವೃತ್ತ ನೌಕರರು ಅನ್ನಪ್ರಸಾದ ಸೇವೆ ಗೈದರು.