ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ಮುಂದೆ ಯಾವುದೇ ಯೋಜನೆ ಬೇಡ: ಶಿವರಾಮ ಗಾಂವ್ಕರ

| Published : Sep 19 2025, 01:01 AM IST

ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ಮುಂದೆ ಯಾವುದೇ ಯೋಜನೆ ಬೇಡ: ಶಿವರಾಮ ಗಾಂವ್ಕರ
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಪುರ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿ ಸಭೆ ನಡೆಯಿತು. ಜಿಲ್ಲೆಯಲ್ಲಿ ಆದ ಯೋಜನೆಯ ಲಾಭ-ಹಾನಿಯ ಕುರಿತು ಜನತೆಯ ಮುಂದಿಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ ಹೇಳಿದರು.

ಯಲ್ಲಾಪುರ: ಜಿಲ್ಲೆಯ ಹರಿಯುವ ನದಿ, ಭೂಮಿ, ಪರಿಸರಕ್ಕೆ ಮತ್ತು ರೈತರ ಹಕ್ಕಿಗೆ ಧಕ್ಕೆಯಾಗುವ ಯಾವುದೇ ಯೋಜನೆಯನ್ನು ಇನ್ಮುಂದೆ ರೂಪಿಸದಂತೆ ನ್ಯಾಯಾಲಯವೇ ಶಾಶ್ವತ ತಡೆಯಾಜ್ಞೆ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ ಹೇಳಿದರು.

ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉ.ಕ. ಜಿಲ್ಲೆ ಹಲವು ಯೋಜನೆಯಿಂದ ನಲುಗಿದೆ. ನಿರಾಶ್ರಿತ ಜಿಲ್ಲೆಯಾಗುತ್ತಿದೆ. ಜಿಲ್ಲೆಯಲ್ಲಿ ಆದ ಯೋಜನೆಯ ಲಾಭ-ಹಾನಿಯ ಕುರಿತು ಜನತೆಯ ಮುಂದಿಡಬೇಕು ಎಂದು ಹೇಳಿದರು.ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿ ಜಿಲ್ಲೆಯಲ್ಲಿ ಯಾವುದೇ ಮಾರಕ ಯೋಜನೆಗಳು ಬಾರದಂತೆ ಶಾಶ್ವತ ತಡೆಯಾಜ್ಞೆ ತರುವಂತೆ ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ. ಅಲ್ಲದೇ ಬೇಡ್ತಿ-ವರದಾ ನದಿ ಜೋಡಣೆ, ಶರಾವತಿ ಪಂಪ್ಡ್ ಸ್ಟೋರೇಜ್, ಕೇಣಿ ಬಂದರು ಹೀಗೆ ಈ ಎಲ್ಲ ಯೋಜನೆಗಳನ್ನು ತಕ್ಷಣ ಬಂದ್ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ಸರ್ಕಾರದ ಯೋಜನೆಗಳಿಗೆ ಅರಣ್ಯ ಇಲಾಖೆ ಸಮ್ಮತಿಸುತ್ತಿರುವುದು ವಿಪರ್ಯಾಸ. ಕಾಡುಪ್ರಾಣಿಯಿಂದ ರೈತರಿಗೆ ರಕ್ಷಣೆ, ಪಶ್ಚಿಮಘಟ್ಟ ಅಭಿವೃದ್ಧಿ, ಅರಣ್ಯೀಕರಣದ ಹೆಸರಿನಲ್ಲಿ ಹೊರದೇಶದಿಂದ ಹಣ ತಂದು ದುಂದುವೆಚ್ಚಗೊಳಿಸುವುದು ನಿಲ್ಲಬೇಕು ಎಂದ ಅವರು, ಜಿಲ್ಲೆಯ ಗ್ರಾಮೀಣ ಸೇರಿದಂತೆ ಎಲ್ಲ ರಸ್ತೆಗಳು ಹದಗೆಟ್ಟು ಸಂಚರಿಸಲಾಗದ ಸ್ಥಿತಿಯಾಗಿದೆ. ತಕ್ಷಣ ಸರಿಪಡಿಸುವಂತೆ ಆಗ್ರಹಿಸಿದರು. ಉತ್ತರ ಪ್ರಾಂತ ಅಧ್ಯಕ್ಷ ವಿವೇಕ ಮೋರೆ ಧಾರವಾಡ ಮಾತನಾಡಿ, ಎಲ್ಲದಕ್ಕೂ ಮುಖ್ಯವಾಗಿ ರೈತರಿಗೆ ನಮ್ಮ ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ನಿರ್ಣಯಗಳನ್ನು ಮಂಡಿಸಿದರು.

ರಾಜ್ಯದ ಕಾರ್ಯಕಾರಿಣಿಯ ಬಾ.ನಾ. ಮಾಧವ ಹೆಗಡೆ, ಜಿಲ್ಲಾ ಕೋಶಾಧ್ಯಕ್ಷ ಗೋಪಾಲಕೃಷ್ಣ ಬಾಳೆಗದ್ದೆ, ಪ್ರಮುಖರಾದ ಶ್ರೀಧರ ಭಾಗ್ವತ್ ಗುಂದ, ರಾಮಚಂದ್ರ ಕವಡಿಕೆರೆ, ಆರ್.ಟಿ. ಭಾಗ್ವತ್ ಭಟ್ಕಳ, ಎಂ.ಆರ್. ಹೆಗಡೆ ಹೊನ್ನಾವರ, ಗಣಪತಿ ಪಟಗಾರ ಕುಮಟಾ, ಮಾಬ್ಲೇಶ್ವರ ಹೆಗಡೆ ಕೊಡ್ಲಗದ್ದೆ, ಅಂಕೋಲಾ ತಾಲೂಕಾಧ್ಯಕ್ಷ ರಾಘವೇಂದ್ರ ಗಾಂವ್ಕಾರ್, ಯಲ್ಲಾಪುರ ತಾಲೂಕಾಧ್ಯಕ್ಷ ವಿಘ್ನೇಶ್ವರ ಹೊಸ್ತೋಟ, ಕಾರ್ಯದರ್ಶಿ ವಿನಾಯಕ ಹೆಗಡೆ ಮಲವಳ್ಳಿ ಉಪಸ್ಥಿತರಿದ್ದರು.