ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಬೆಳಗಾವಿಯಲ್ಲಿ ನಡೆದ ಉತ್ತರ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಭೀಮಾತೀರದ ಪೊಲೀಸ್ ಅಧಿಕಾರಿ ಅಮೋಘ ಸಾಧನೆ ಮಾಡುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇಂಡಿ ವೃತ್ತ ನಿರೀಕ್ಷಕ ಮಲ್ಲಿಕಾರ್ಜುನ ಡಪ್ಪಿನ ಉತ್ತಮ ಪ್ರದರ್ಶನ ತೋರುವ ಮೂಲಕ ಎರಡನೇ ಬಾರಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯ ಪೊಲೀಸ್ ಇಲಾಖೆಯ ಖದರ್ ಪ್ರದರ್ಶಿಸಿದ್ದಾರೆ. ವಲಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು 6 ಚಿನ್ನದ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಜ.2 ಮತ್ತು 3 ರಂದು ಜರುಗಿದ ಇದೇ ಸ್ಪರ್ಧೆಯಲ್ಲಿಯೂ 6 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದರು.
ಈ ಕ್ರೀಡಾಕೂಟ ಸ್ಪರ್ಧೆಯಲ್ಲಿ ವಿಜಯಪುರ, ಬಾಗಲಕೋಟ, ಧಾರವಾಡ, ಗದಗ, ಮತ್ತು ಬೆಳಗಾವಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಪೊಲೀಸ್ ವೃತ್ತಿಪರತೆಗೆ ಸಂಬಂಧಿಸಿದ ಬೆಳಗಾವಿ ಉತ್ತರ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.ಮಲ್ಲಿಕಾರ್ಜುನ ಡಪ್ಪಿನ 2005ರಲ್ಲಿ ತರಬೇತಿ ಪಡೆದು, ಬೆಳಗಾವಿಯಲ್ಲಿ ಫ್ರೊಬೇಷನರಿ ಅವಧಿ ಪೂರ್ಣಗೊಳಿಸಿ, ಹುಬ್ಬಳ್ಳಿ-ಧಾರವಾಡ, ರಾಯಚೂರು, ಯಾದಗಿರಿ, ಬೀದರ, ಕಲಬುರಗಿ, ಬಳ್ಳಾರಿ, ವಿಜಯನಗರ ಠಾಣೆಗಳಲ್ಲಿ ಕಾರ್ಯನಿರ್ವಹಿಸಿ, ಜನಸ್ನೇಹಿ ಅಧಿಕಾರಿಯಾಗಿ ಹೆಸರು ಗಳಿಸಿದ್ದರು. ಪ್ರಸ್ತುತ ಡಪ್ಪಿನ ಅವರು ಇಂಡಿ ಸಿಪಿಐ ಗ್ರಾಮೀಣ ಪೊಲೀಸ್ ವೃತ್ತ ನಿರೀಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ವೃತ್ತಿ ನೈಪುಣ್ಯತೆಯೊಂದಿಗೆ ಕೈಗೊಳ್ಳಬೇಕಾದ ವೈಜ್ಞಾನಿಕ ಕಾನೂನು ಜ್ಞಾನ, ಸಾಕ್ಷಿಗಳ ಸಂಗ್ರಹದಲ್ಲಿ ನೈಪುಣ್ಯತೆ, ಬೆರಳಚ್ಚು ತನಿಖೆ ವೈಜ್ಞಾನಿಕ ತನಿಖೆ, ವಿಧಿ ವಿಜ್ಞಾನ, ಪಾದದಮುದ್ರೆ, ಪೋಟೋ, ವಿಡಿಯೋಗ್ರಪಿ, ಶ್ವಾನದಳ, ಪೊಲೀಸ್ ವೃತ್ತಿಪರ ತನಿಖೆ ಸೇರಿದಂತೆ ಹಲವು ಮಹತ್ವದ ಪರೀಕ್ಷೆಯಲ್ಲಿ ಸಿಪಿಐ ಡಪ್ಪಿನ ಅತ್ಯುತ್ತಮ ಸಾಧನೆ ಮಾಡಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ದೈಹಿಕ ಸಾಮರ್ಥ್ಯ, ಮಾಕ್ಸ್‌ಮನ್ ಶೀಫ್, ಅಡೆ ತಡೆ ಕೋರ್ಸ್, ಜ್ಞಾನ ವಿನಿಮಯ, ವೃತ್ತಿಪರ ಅಭಿವೃದ್ಧಿ, ಸ್ಥೈರ್ಯ ವರ್ಧಕ, ಸಾರ್ವಜನಿಕ ಇಮೇಜ್ ವರ್ಧನೆ ಮತ್ತು ಯುದ್ದ ತಂತ್ರದ ಕೌಶಲ್ಯತೆ, ಸಿಬ್ಬಂದಿ ಅಭಿವೃದ್ಧಿ ಸ್ಪರ್ಧೆಗಳಲ್ಲಿ ಡಪ್ಪಿನ ಚಿನ್ನದ ಪದಕಗಳನ್ನು ಪಡೆದಿದ್ದಾರೆ.ಕಂಪ್ಯೂಟರ್ ಅವಾರ್ನೆಸ್, ಪೊಲೀಸ್ ಪೋಟೋಗ್ರಾಪಿ, ಪೊಲೀಸ್ ವಿಡಿಯೋಗ್ರಾಪಿ, ಆಂಟಿ ಸಬ್ಜೆಕ್ಟ್ ಚೆಕ್ಸ್, ಸ್ಪೇಷಿಯಲ್ ಕಾನಿನ್ ಯುನಿಟ್ ಕಂಟೆಸ್ಟ್, ಅಬ್ಜರವೇಷನ್ ಟೆಸ್ಟ್ ಪರೀಕ್ಷೆಗಳಲ್ಲಿ ಡಪ್ಪಿನ ಅತೀ ಹೆಚ್ಚು ಅಂಕ ಪಡೆದಿದ್ದಾರೆ.
ಲಖನೌದಲ್ಲಿ 68ನೇ ರಾಷ್ಟ್ರೀಯ ಕರ್ತವ್ಯಕೂಟ ಹಿನ್ನಲೆಯಲ್ಲಿ ಎಲ್ಲ ತಾಲೂಕು, ಜಿಲ್ಲಾ ಹಾಗೂ ವಲಯ ಮಟ್ಟಗಳಲ್ಲಿ ಪೊಲೀಸ್ ಕರ್ತವ್ಯ ಕೂಟವನ್ನು ಆಯೋಜಿಸಿ ವಿಜೇತರಾದವರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಅಲ್ಲೂ ಉತ್ತಮ ಪ್ರದರ್ಶನ ನೀಡಿದರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವೃತ್ತಿ ಪರತೆಯ ಬಗ್ಗೆ ಹೆಚ್ಚಿನ ತರಬೇತಿ ನೀಡಿ ರಾಷ್ಟ್ರೀಯ ಪೊಲೀಸ್ ಕರ್ತವ್ಯ ಕೂಟಕ್ಕೆ ಕಳುಹಿಸಿಕೊಡಲಾಗುತ್ತದೆ. ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ದೇಶದ ಎಲ್ಲ ರಾಜ್ಯಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಪಾಲ್ಗೊಳ್ಳಲಿದ್ದಾರೆ.-----------ಬಾಕ್ಸ್
ಏನಿದು ಪೊಲೀಸ್ ಕರ್ತವ್ಯ ಕೂಟ?ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಡ್ಯೂಟಿ ಮೀಟ್ ಪೊಲೀಸರ ಶ್ರೇಷ್ಠತೆಗೆ ವೇಗವರ್ಧಕ ಮತ್ತು ಪ್ರತಿಷ್ಠಿತ ಸ್ಪರ್ಧೆ. ಈ ಸ್ಪರ್ಧೆ ಪೊಲೀಸ್ ಸಿಬ್ಬಂದಿಯನ್ನು ಒಟ್ಟುಗೂಡಿಸುತ್ತದೆ. ಈ ವಾರ್ಷಿಕ ಕಾರ್ಯಕ್ರಮವು ಅಧಿಕಾರಿಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು, ಸೌಹಾರ್ಧತೆಯನ್ನು ಬೆಳೆಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಪೊಲೀಸ್ ಕೂಟದಲ್ಲಿ ವೃತ್ತಿಗೆ ಅನುಕೂಲವಾಗುವ ಸ್ಪರ್ಧೆಗಳು, ವಿಚಾರ ಸಂಕಿರಣಗಳು ನಡೆಯಲಿವೆ. ಕ್ಲಿಷ್ಟ ಪ್ರಕರಣಗಳನ್ನು ಭೇದಿಸಲು ಬಳಸಿದ ಅಧುನಿಕ ತನಿಖಾ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವಿವಿಧ ರೀತಿಯಲ್ಲಿ ಕಾರ್ಯಕ್ಷಮತೆ, ಮನೋಸ್ಥೈರ್ಯ ಹೆಚ್ಚಿಸಿಕೊಳ್ಳುವ ಕುರಿತು ಹಿರಿಯ ಅಧಿಕಾರಿಗಳ ಜತೆ ಮುಖಾಮುಖಿ ಸಂವಾದ ನಡೆಯುತ್ತದೆ.-------------
ಕೋಟ್ಪೊಲೀಸ್ ಕರ್ತವ್ಯ ಕೂಟವು ಅಪರಾಧ ತಡೆ ಮತ್ತು ಅಪರಾಧ ಪತ್ತೆಗೆ ಸಹಕಾರಿಯಾಗಿದೆ. ಇದು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲಿರುವ ವೃತ್ತಿ ಪರತೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದೆ.
- ಮಲ್ಲಿಕಾರ್ಜುನ ಡಪ್ಪಿನ, ಸಿಪಿಐ, ಗ್ರಾಮೀಣ ವೃತ್ತ