ಭೈರಪ್ಪ ಕನ್ನಡ ಸಾರಸ್ವತ ಲೋಕದ ಧ್ರುವತಾರೆ: ಶಾಸಕ ಆರಗ

| Published : Sep 30 2025, 02:00 AM IST

ಸಾರಾಂಶ

ಕನ್ನಡ ಸಾರಸ್ವತ ಲೋಕದ ಧೃವತಾರೆಯಂತಿದ್ದ ಎಸ್.ಎಲ್.ಭೈರಪ್ಪನವರು ವಿಶ್ವಕವಿಯಾಗಿದ್ದು ಕೃತಿಯ ಜತೆಗೆ ಶಾಶ್ವತವಾಗಿ ಉಳಿದಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಕನ್ನಡ ಸಾರಸ್ವತ ಲೋಕದ ಧೃವತಾರೆಯಂತಿದ್ದ ಎಸ್.ಎಲ್.ಭೈರಪ್ಪನವರು ವಿಶ್ವಕವಿಯಾಗಿದ್ದು ಕೃತಿಯ ಜತೆಗೆ ಶಾಶ್ವತವಾಗಿ ಉಳಿದಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪನವರ ಗೌರವಾರ್ಥ ಪಟ್ಟಣದ ಗ್ರಾಮೀಣಸೌಧದಲ್ಲಿ ಸೋಮವಾರ ಏರ್ಪಡಿಸಿದ್ದ ಸಾರ್ವಜನಿಕ ಶ್ರದ್ದಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ, ಭೈರಪ್ಪನವರ ಸಾಹಿತ್ಯ ಕೇವಲ ಭಾರತದ ಭಾಷೆಗಳಿಗೆ ಮಾತ್ರವಲ್ಲದೇ ಜಗತ್ತಿನ ಇತರೆ ದೇಶಗಳ ಅತೀ ಹೆಚ್ಚು ಭಾಷೆಗಳಿಗೂ ಅವರ ಸಾಹಿತ್ಯ ತರ್ಜುಮೆಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕನ್ನಡಕ್ಕೆ ಸೀಮಿತವಾಗಿರದೇ ವಿಶ್ವಕವಿಯಾಗಿದ್ದಾರೆ ಎಂದು ಹೇಳಿದರು.

ಪರಿವರ್ತನೆಯ ಬಗ್ಗೆ ವಿಶ್ವಾಸವನ್ನು ಹೊಂದಿದ್ದ ಸಾಹಿತ್ಯದೊಂದಿಗೆ ಭೈರಪ್ಪನವರು ಸಾಮಾಜಿಕ ಕಾಳಜಿಯನ್ನೂ ಹೊಂದಿದ್ದರು. ಯಡ್ಯೂರಪ್ಪನವರ ಅಧಿಕಾರವದಿಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ತಮ್ಮ ಹುಟ್ಟೂರಿನ ಕೃಷಿಭೂಮಿಗೆ ಮತ್ತು ಶಾಶ್ವತ ಕುಡಿಯೋ ನೀರನ್ನು ಒದಗಿಸಿದ ಮಹನೀಯ. ಹೀಗೆ ಕೃತಿಯ ಜೊತೆಗೆ ಸಾಮಾಜಿಕ ಕಾಳಜಿಯೊಂದಿಗೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಹೇಳಿದರು.

ಭೈರಪ್ಪನವರ ಸಂಬಂಧಿಯೂ ಆಗಿರುವ ತುಂಗಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಿ.ಎಸ್.ಸೋಮಶೇಖರ್ ಮಾತನಾಡಿ, ಸತ್ಯನಿಷ್ಠ ಮತ್ತು ವಸ್ತು ನಿಷ್ಠರಾಗಿದ್ದ ಭೈರಪ್ಪನವರು ಬದುಕಿನ ಬೆಂಕಿಯಲ್ಲಿ ಅರಳಿದವರು. ಅವರ ಬರವಣಿಗೆ ಮತ್ತು ವ್ಯಕ್ತಿತ್ವದಲ್ಲಿ ವ್ಯತ್ಯಾಸವೇ ಇರಲಿಲ್ಲ. ಆವರಣದಂತ ಕೃತಿಯನ್ನು ಬರೆದು ಜೈಸಿಕೊಳ್ಳುವುದು ಭೈರಪ್ಪನವರಿಗೆ ಮಾತ್ರ ಸಾಧ್ಯ. ಪರ್ವದಂತ ಕಾದಂಬರಿಯನ್ನು ಹೊಸದಾದ ರೀತಿಯಲ್ಲಿ ಅರ್ಥ ವಿಶ್ಲೇಷಣೆಯೊಂದಿಗೆ ಸಮಾಜದ ಮುಂದೆ ಪ್ರಸ್ತುತಪಡಿಸಿದ ಅವರಿಗೆ ಎಂಟೆದೆ ಬೇಕಿತ್ತು ಎಂದು ಗುಣಗಾನ ಮಾಡಿದರು.

ತಹಸಿಲ್ದಾರ್ ಎಸ್.ರಂಜಿತ್, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಶೈಲಾ, ಕಂದಾಯ ಇಲಾಖೆಯ ವೇದಾವತಿ ನುಡಿ ನಮನ ಸಲ್ಲಿಸಿದರು. ಗ್ರಾಮಲೆಖ್ಖಿಗ ಸುರಥಕುಮಾರ್ ನಿಖಿಲ್ ಕಾಮತ್ ಹೊದಲ ಬಸವರಾಜ್ ಇದ್ದರು.