ಹಳಿಯಾಳ: ಬಿರ್ಸಾ ಮುಂಡಾ ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲ. ಬ್ರಿಟಿಷ್ ವಸಾಹತುಶಾಹಿ ಆಡಳಿತ ಮತ್ತು ಬುಡಕಟ್ಟು ಸಮುದಾಯದ ಮೇಲಿನ ಶೋಷಣೆಯ ವಿರುದ್ಧ ಜನರನ್ನು ಸಂಘಟಿಸಿ ಹೋರಾಟ ನಡೆಸಿದ ಧೀರ ನಾಯಕರು ಎಂದು ತಾಪಂ ಇಒ ವಿಲಾಸರಾಜ್ ಪ್ರಸನ್ನ ಹೇಳಿದರು.

ತಾಲೂಕಿನ ಹವಗಿ ಗ್ರಾಮದಲ್ಲಿರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಭಗವಾನ್ ಬಿರ್ಸಾ ಮುಂಡಾ ಜನಜಾತೀಯ ಗೌರವ ದಿವಸ ಅಭಿಯಾನ ಕಾರ್ಯಕ್ರಮದ ಅಂಗವಾಗಿ, ಆಯೋಜಿಸಿದ್ದ ಅವರ 151ನೇ ಜನ್ಮ ಜಯಂತಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅವರ ಜೀವನವು ಧೈರ್ಯ, ತ್ಯಾಗ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಜೀವಂತ ಉದಾಹರಣೆಯಾಗಿದೆ. ತಮ್ಮ ಸಮುದಾಯದ ಭೂಮಿ, ಅರಣ್ಯ, ನೀರು ಮತ್ತು ಹಕ್ಕುಗಳ ರಕ್ಷಣೆಗಾಗಿ ಹೋರಾಡಿದ ಅವರು, ಮೂಢನಂಬಿಕೆ, ಸಾಮಾಜಿಕ ಅಸಮಾನತೆ ಮತ್ತು ಶೋಷಣೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು ಎಂದರು.

ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯ್ಕ ಬಾವಿಕೇರಿ ಮಾತನಾಡಿ, ಬಿರ್ಸಾ ಮುಂಡಾ ಅವರು ಬುಡಕಟ್ಟು ಸಮುದಾಯದ ಪ್ರೀತಿಯ ನಾಯಕರು. ಭೂಮಿಯ ರಕ್ಷಕರು ಮತ್ತು ಜನರ ಹಕ್ಕುಗಳ ಧ್ವನಿಯಾಗಿ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ್ ಪವಾರ ಮಾತನಾಡಿ, ಬಿರ್ಸಾ ಮುಂಡಾ ಅವರು ಬುಡಕಟ್ಟು ಸಮುದಾಯದ ಅಸ್ಮಿತೆಯ ರಕ್ಷಕರು. ಜನರ ಹಕ್ಕುಗಳ ಧ್ವನಿ ಮತ್ತು ದೇಶದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕರಾಗಿ ಸ್ಮರಣೀಯರು ಎಂದರು.ಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರ್ ಪೂಜಾರಿ ಅವರು ಬಿರ್ಸಾ ಮುಂಡಾ ಅವರ ಜೀವನ ಚರಿತ್ರೆಯ ಕುರಿತು ಉಪನ್ಯಾಸ ನೀಡಿದರು. ನಂತರ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಬುಡಕಟ್ಟು ಸಿದ್ದಿ ಜನಾಂಗದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು.


ಕಾರ್ಯಕ್ರಮದಲ್ಲಿ ಸಿದ್ದಿ ಸಮುದಾಯದ ಹಿರಿಯ ಮುಖಂಡ ಇಮಾಮ್ ಸಿದ್ದಿ, ಜುಜೆ ನಾರ್ಬೋಳಕರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಗದೀಶ್ ಜುಟ್ಟಲ್, ದರ್ಶನ್ ನಾಯಕ್, ಸ್ಮಿತಾ ಬೆಳವಡಿ, ಶಾಲೆಯ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸೌಮ್ಯ ಭದ್ರಶೆಟ್ಟಿ ಮತ್ತು ರಾಜೇಶ್ವರಿ ಕೆರಿಮಠ ಕಾರ್ಯಕ್ರಮ ನಿರ್ವಹಿಸಿದರು.