ಸಂಚುಕೋರರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಬಿಜೆಪಿ ಆಗ್ರಹ

| Published : Sep 10 2025, 01:03 AM IST

ಸಾರಾಂಶ

ಗಣೇಶೋತ್ಸವವನ್ನೇ ಗುರಿಯಾಗಿಸಿಕೊಂಡು ಹೊರಗಡೆಯಿಂದ ಬಂದಿರುವ ಮುಸ್ಲಿಂ ಗೂಂಡಾಗಳು ದ್ವೇಷದ ಕಿಡಿ ಹಚ್ಚುತ್ತಿದ್ದಾರೆ. ಮಸೀದಿ ಸುತ್ತಮುತ್ತಲ ಲೈಟ್‌ಗಳನ್ನೆಲ್ಲಾ ಆಫ್ ಮಾಡಿ ಮಸೀದಿಯೊಳಗಿನಿಂದಲೇ ಕಲ್ಲು ತೂರಾಟ ನಡೆಸಿ ಶಾಂತಿಯುತವಾಗಿ ನಡೆಸಲಾಗುತ್ತಿದ್ದ ಗಣೇಶ ವಿಸರ್ಜನಾ ಮೆರವಣಿಗೆಗೆ ಭಂಗ ಉಂಟುಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರಿನ ರಾಮ್‌ರಹೀಂ ನಗರದಲ್ಲಿರುವ ಮಸೀದಿಯೊಳಗಿನಿಂದ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಿದ ಸಂಚುಕೋರರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಪಡಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ವಸಂತಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಬಿಜೆಪಿ ಕಾರ್ಯಕರ್ತರು ಕಲ್ಲುತೂರಾಟದಿಂದ ಸಾರ್ವಜನಿಕರಿಗೆ ಆಗಿರುವ ಗಾಯಗಳಿಗೆ ಉಚಿತ ಚಿಕಿತ್ಸೆ ಹಾಗೂ ಆಸ್ತಿಯ ಹಾನಿ ವೆಚ್ಚವನ್ನು ಗಲಭೆಕೋರರಿಂದ ವಸೂಲಿಮಾಡಿಕೊಡುವಂತೆ ಒತ್ತಾಯಿಸಿದರು.

ಗಣೇಶೋತ್ಸವವನ್ನೇ ಗುರಿಯಾಗಿಸಿಕೊಂಡು ಹೊರಗಡೆಯಿಂದ ಬಂದಿರುವ ಮುಸ್ಲಿಂ ಗೂಂಡಾಗಳು ದ್ವೇಷದ ಕಿಡಿ ಹಚ್ಚುತ್ತಿದ್ದಾರೆ. ಮಸೀದಿ ಸುತ್ತಮುತ್ತಲ ಲೈಟ್‌ಗಳನ್ನೆಲ್ಲಾ ಆಫ್ ಮಾಡಿ ಮಸೀದಿಯೊಳಗಿನಿಂದಲೇ ಕಲ್ಲು ತೂರಾಟ ನಡೆಸಿ ಶಾಂತಿಯುತವಾಗಿ ನಡೆಸಲಾಗುತ್ತಿದ್ದ ಗಣೇಶ ವಿಸರ್ಜನಾ ಮೆರವಣಿಗೆಗೆ ಭಂಗ ಉಂಟುಮಾಡಿದ್ದಾರೆ. ಪೊಲೀಸರು ಶಾಂತಿಯನ್ನು ಕದಡಿದವರನ್ನು ಬಿಟ್ಟು ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಮಹಿಳೆಯರೆಂಬುದನ್ನೂ ಲೆಕ್ಕಿಸದೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದು ಖಂಡನೀಯ. ಗಣೇಶೋತ್ಸವ ಮೆರವಣಿಗೆಗೆ ಸೂಕ್ತ ಬಂದೋಬಸ್ತ್ ನೀಡುವಲ್ಲಿ ವಿಫಲರಾಗಿರುವ ಪೊಲೀಸರು ತಮ್ಮ ಹುಳುಕನ್ನು ಮುಚ್ಚಿಕೊಳ್ಳುವುದಕ್ಕೆ ಅಮಾಯಕರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಮಹಿಳೆಯರ ಮೇಲೆ ಲಾಠಿ ಬೀಸಿದ ಪೊಲೀಸರನ್ನು ಅಮಾನತುಗೊಳಿಸುವಂತೆ ಆಗ್ರಹಪಡಿಸಿದರು.

ಕಲ್ಲು ತೂರಾಟದ ಗಲಭೆಯ ಹಿಂದೆ ಹಲವು ಮೂಲಭೂತ ಸಂಘಟನೆಗಳು ಇವೆ ಎಂದ ಅನುಮಾನ ಮೂಡಿದೆ. ಕೂಡಲೇ ಸೂಕ್ತ ತನಿಖೆ ನಡೆಸಿ ಶಾಂತಿ ಕದಡಿದ ಗಲಭೆಕೋರರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಸಾರ್ವಜನಿಕರಿಗೆ ಆಗಿರುವ ಗಾಯದ ಚಿಕಿತ್ಸಾ ವೆಚ್ಚ, ಆಸ್ತಿ ಹಾನಿಯನ್ನು ಗಲಭೆಕೋರರಿಂದಲೇ ವಸೂಲಿ ಮಾಡಬೇಕು. ಇಂತಹ ಸಂಚುಕೋರರ ಬಗ್ಗೆ ಮೃದುಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಎಚ್.ಆರ್.ಅರವಿಂದ್, ಅಶೋಕ್ ಜಯರಾಂ, ಎಂ.ಬಿ.ರಮೇಶ್, ಸಿ.ಟಿ.ಮಂಜುನಾಥ, ಚಾಮರಾಜು, ಕೆ.ಸಿ.ನಿತ್ಯಾನಂದ, ಮಾದರಾಜೇ ಅರಸು, ಹೊಸಹಳ್ಳಿ ಶಿವು, ಕೆ.ಮಧು, ಬೂದನೂರು ಸತೀಶ, ಪಿ.ಮಹೇಶ, ಎನ್.ವಿನೋದ, ಶೇಖರ್, ಪ್ರಸನ್ನಕುಮಾರ್, ಆನಂದ್, ಜಗನ್ನಾಥ, ಎಂ.ಎಂ.ಸುನೀಲ್, ಸಿದ್ದರಾಜುಗೌಡ, ಎನ್.ಬಿ.ನಾರಾಯಣ ಮತ್ತಿತರರು ಭಾಗವಹಿಸಿದ್ದರು.