ಭರವಸೆ ಈಡೇರಿಸುವಲ್ಲಿ ಬಿಜೆಪಿ ಹಿಂದೆಬಿದ್ದಿಲ್ಲ: ಕಾರಜೋಳ

| Published : Apr 25 2024, 01:10 AM IST

ಭರವಸೆ ಈಡೇರಿಸುವಲ್ಲಿ ಬಿಜೆಪಿ ಹಿಂದೆಬಿದ್ದಿಲ್ಲ: ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಚುನಾವಣೆ ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಬುಧವಾರವೂ ಸಹ ಬಿರುಸಿನ ಪ್ರಚಾರ ನಡೆಸಿ ಬಿಜೆಪಿಗೆ ಮತ ನೀಡಿ ಮೋದಿಗೆ ಶಕ್ತಿ ತುಂಬುವಂತೆ ಮತದಾರರಲ್ಲಿ ವಿನಂತಿಸಿದರು.

ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಚುನಾವಣೆ ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಬುಧವಾರವೂ ಸಹ ಬಿರುಸಿನ ಪ್ರಚಾರ ನಡೆಸಿ ಬಿಜೆಪಿಗೆ ಮತ ನೀಡಿ ಮೋದಿಗೆ ಶಕ್ತಿ ತುಂಬುವಂತೆ ಮತದಾರರಲ್ಲಿ ವಿನಂತಿಸಿದರು.

ಬುಧವಾರ ತಳಕು ಗ್ರಾಮದಲ್ಲಿ ವಾಲ್ಮೀಕಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಭಾರತೀಯ ಜನತಾ ಪಕ್ಷ ಕಳೆದ ಹಲವಾರು ದಶಕಗಳಿಂದ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ವಿಶೇಷವಾಗಿ ಕಳೆದ 10 ವರ್ಷಗಳಿಂದ ಪ್ರಧಾನಿಯಾಗಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸಹ ತಮ್ಮದೇಯಾದ ದಕ್ಷ ಕೆಲಸ ಕಾರ್ಯಗಳ ಮೂಲಕ ಹೆಸರುವಾಸಿಯಾದವರು. ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸೌಖ್ಯವಾಗಿ ಭಾರತಕ್ಕೆ ಕರೆತಂದು ಎಲ್ಲಾ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದರು. ರಾಜತಾಂತ್ರಿಕ ನಿಲುವಿನಲ್ಲಿ ಅಪಾರ ಅನುಭವ ಹೊಂದಿರುವ ಮೋದಿ ಇಂದು ವಿಶ್ವದ ನಾಯಕರು ಭಾರಕ್ಕೆ ಸ್ವಯಂಪ್ರೇರಿತವಾಗಿ ಆಗಮಿಸುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಬಿಜೆಪಿ ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ಎಂದಿಗೂ ಹಿಂದೆಬಿದ್ದಿಲ್ಲ. ಮಹರ್ಷಿ ವಾಲ್ಮೀಕಿಯವರ ಸೇವೆ ಮತ್ತು ಆದರ್ಶಗಳನ್ನು ಜನರು ನೆನಪಿಸಿಕೊಳ್ಳುವಂತೆ ಮಾಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಲ್ಮೀಕಿ ಜಯಂತಿ ಆಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ರೂಪಿಸಿದರು. ಕಾಂಗ್ರೆಸ್ ಪಕ್ಷ ಇಲ್ಲಸಲ್ಲದ ಸುಳ್ಳು ಆರೋಪಗಳ ಮೂಲಕ ಜರನ್ನು ದಾರಿ ತಪ್ಪಿಸುತ್ತಿದ್ದು, ಮತದಾರರು ೨೬ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತಚಲಾಯಿಸುವಂತೆ ಮನವಿ ಮಾಡಿದರು.

ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಬಿಜೆಪಿ ಯಾವುದೇ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಬೇಕಾದ ಹಣ ನೀಡಿದರೂ ಸುಳ್ಳು ಜಾಹೀರಾತಿನ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ. ರಾಜ್ಯದ ಪರಿಶಿಷ್ಟ ಜಾತಿ, ವರ್ಗದ ಜನತೆ ಬಿಜೆಪಿ ಪರವಾಗಿ ಮತಚಾಯಿಸುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಗೋವಿಂದ ಕಾರಜೋಳ ಹೊರಗಿನ ಅಭ್ಯರ್ಥಿ ಎಂದು ಪ್ರಚಾರ ಮಾಡುತ್ತಾರೆ. ಆದರೆ, ಬಿ.ಎನ್.ಚಂದ್ರಪ್ಪ ಪಕ್ಕದ ಜಿಲ್ಲೆಯಿಂದ ವಲಸೆ ಬಂದವರು. ಆ ಬಗ್ಗೆ ಮಾತನಾಡದ ಕಾಂಗ್ರೆಸ್ ನಾಯಕರು ಗೋವಿಂದ ಕಾರಜೋಳ ಹೊರಗಡೆಯಿಂದ ಬಂದವರು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಇಡೀ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಪರವಾಗಿದೆ. ಈ ಬಾರಿ ಜಿಲ್ಲೆಯಿಂದ ಅಭ್ಯರ್ಥಿ ಗೋವಿಂದ ಕಾರಜೋಳ ಸಂಸತ್‌ಗೆ ಪ್ರವೇಶ ಗ್ಯಾರಂಟಿ ಎಂದರು.

ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಶಿವಣ್ಣ, ತಳಕು-ನಾಯಕಹಟ್ಟಿ ಮಂಡಲಾಧ್ಯಕ್ಷ ಈ.ರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಚನ್ನಗಾನಹಳ್ಳಿ ಮಲ್ಲೇಶ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಆರ್.ಅನಿಲ್‌ ಕುಮಾರ್, ಕೆ.ಟಿ.ಕುಮಾರಸ್ವಾಮಿ, ಡಾ.ಮಂಜುನಾಥ, ಬೆಂಕಿ ಗೋವಿಂದಪ್ಪ, ಜೆಡಿಎಸ್ ಮುಖಂಡ ವೀರಭದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಓಬಳೇಶ್, ಮಂಜುನಾಥ ಮುಂತಾದವರು ಭಾಗವಹಿಸಿದ್ದರು.