ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವ ಬಿ.ನಾಗೇಂದ್ರ ಅವರ ಪದಚ್ಯುತಿಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷ ಸೋಮವಾರ ರಾಜ್ಯ ಬಿಜೆಪಿ ಅಧ್ಯಕ್ಷರ ಕರೆಯ ಮೇರೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಇದೇ ಬಿ.ನಾಗೇಂದ್ರ ಅವರ ಮೌಖಿಕ ಆದೇಶದ ಮೇರೆಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು. ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ಅದರಲ್ಲಿ ನಾಗೇಂದ್ರ ಅವರು 88 ಕೋಟಿ ರು.ಗಳನ್ನು ತಮ್ಮ ಸ್ವಂತಕ್ಕೆ ಬಳಸಿದ್ದರ ಬಗ್ಗೆ ತನಿಖೆಯಿಂದ ಬೆಳಕಿಗೆ ಬಂದಿದೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ಅಮಾನತು ಸೇರಿದಂತೆ ನಾಗೇಂದ್ರ ಅವರೇ ರಾಜೀನಾಮೆ ನೀಡಿದ್ದರು. ಆದರೆ, ಮತ್ತೆ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಪರಿಶಿಷ್ಟರ ಅನುದಾನವನ್ನು ನುಂಗಿ ನೀರು ಕುಡಿದ ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಯಾವ ನೈತಿಕ ಹೊಣೆ ಹೊತ್ತು ಅವರನ್ನು ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಈಗಾಗಲೇ ಅವರು ಜೈಲಿಗೆ ಹೋಗಿ ಬಂದಿದ್ದು ನ್ಯಾಯಾಲಯದಲ್ಲಿ ಮತ್ತು ಇಡಿಯಲ್ಲಿ ಪ್ರಕರಣ ತನಿಖೆ ಪ್ರಗತಿಯಲ್ಲಿದೆ. ಆದರೂ ಅವರನ್ನು ಮತ್ತೆ ಮಂತ್ರಿ ಮಾಡಿದ ಕಾರಣ ಏನು? ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ 187 ಕೋಟಿ ರು.ಗಳನ್ನು ಸಚಿವ ಬಿ.ನಾಗೇಂದ್ರ ಅವರ ಮೌಖಿಕ ಆದೇಶದ ಮೇಲೆ ಅಧಿಕಾರಿಗಳು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆ ನಿಗಮದ ಅಧಿಕಾರಿಯಾಗಿದ್ದ ಚಂದ್ರಶೇಖರ್ ತಾನು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ತನ್ನ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ಇನ್ನೂ ದೊರಕಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಒಂದು ವೇಳೆ ತಮಗೆ ಸಚಿವ ಸ್ಥಾನ ನೀಡದಿದ್ದರೆ ವಾಲ್ಮೀಕಿ ಹಗರಣದ ವಿವರಗಳನ್ನು ಬಯಲಿಗೆ ಎಳೆಯುತ್ತೇನೆ ಎಂದು ಬಿ. ನಾಗೇಂದ್ರ ಕಾಂಗ್ರೆಸ್ ಹೈಕಮಾಂಡ್‌ಗೆ ಬ್ಲ್ಯಾಕ್‌ಮೇಲ್ ಮಾಡಿದ್ರಾ? ಅದಕ್ಕೆ ಹೆದರಿ ಕಳಂಕಿತ ಆರೋಪ ಹೊತ್ತಿರುವ ನಾಗೇಂದ್ರಗೆ ಸಚಿವ ಸ್ಥಾನ ನೀಡಿದ್ರಾ ಎಂದು ಪ್ರಶ್ನಿಸಿದ ಅವರು ಈ ಗಂಭೀರ ಪ್ರಕರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ಹೈಕಮಾಂಡ್ ನಾಗೇಂದ್ರಗೆ ಸಚಿವ ಸ್ಥಾನ ನೀಡಿದೆ ಎಂದು ಆಪಾದಿಸಿದರು.
ಅನಿರ್ದಿಷ್ಟಾವಧಿ ಧರಣಿಯಲ್ಲಿ ಪ್ರಮುಖರಾದ ಆರ್.ಕೆ. ಸಿದ್ಧರಾಮಣ್ಣ, ಎಸ್.ದತ್ರಾತ್ರಿ, ಹರಿಕೃಷ್ಣ, ಮೋಹನ್ ರೆಡ್ಡಿ, ಜ್ಯೋತಿ ಪ್ರಕಾಶ್, ಮಾಲತೇಶ್, ಗಣೇಶ್ ಬಿಳಕಿ, ವಿನ್ಸೆಂಟ್ ರೋಡ್ರಿಗಸ್, ಹರೀಶ್, ಸಂತೋಷ್, ರಶ್ಮಿ ಶ್ರೀನಿವಾಸ್, ಸುರೇಖಾ ಮುರಳೀಧರ, ಹರೀಶ್, ಚಂದ್ರಶೇಖರ್, ಮಂಜುನಾಥ್, ಶ್ರೀನಾಗ್ ಇದ್ದರು.
-------------------------
ಪೋಟೋ: 17ಎಸ್ಎಂಜಿಕೆಪಿ04ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವ ಬಿ.ನಾಗೇಂದ್ರ ಅವರ ಪದಚ್ಯುತಿಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷ ಸೋಮವಾರ ರಾಜ್ಯ ಬಿಜೆಪಿ ಅಧ್ಯಕ್ಷರ ಕರೆ ಮೇರೆಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಯಿತು.