ಸಾರಾಂಶ
ಕರಪತ್ರದಲ್ಲಿ ಕಾಂಗ್ರೆಸ್‌ನಿಂದ ವಿಧಾನಸಭೆಗೆ ಕಾರ್ಕಳದಿಂದ ಸ್ಪರ್ಧಿಸಿದ್ದ ಮುನಿಯಾಲು ಉದಯ ಶೆಟ್ಟಿ ಅವರ ಫೋಟೋವನ್ನು ಮುದ್ರಿಸಬೇಕಾಗಿತ್ತು. ಆದರ ಬದಲು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಫೋಟೋವನ್ನು ಮುದ್ರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ನೈರುತ್ಯ ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗಂಭೀರ ಎಡವಟ್ಟು ಮಾಡಿಕೊಂಡಿದೆ. ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನಾಯಕರೊಬ್ಬರ ಬದಲು ಬಿಜೆಪಿ ನಾಯಕರೊಬ್ಬರ ಫೋಟೋವನ್ನು ಮುದ್ರಿಸಿ ಪೇಚಿಗೆ ಸಿಲುಕಿದೆ.ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಕೆ. ಮಂಜುನಾಥ ಕುಮಾರ್ ಅವರು ಪ್ರಣಾಳಿಕೆಯನ್ನು ತಯಾರಿಸಿದ್ದಾರೆ. ಅದರಲ್ಲಿ ಪಕ್ಷದ ನಾಯಕರ ಫೋಟೋಗಳ ಸಾಲಿನಲ್ಲಿ ಉಡುಪಿ ಕಾಂಗ್ರೆಸ್‌ನ ಪ್ರಭಾವಶಾಲಿ ನಾಯಕ, ವಿಧಾನಸಭೆಗೆ ಕಾರ್ಕಳದಿಂದ ಸ್ಪರ್ಧಿಸಿದ್ದ ಮುನಿಯಾಲು ಉದಯ ಶೆಟ್ಟಿ ಅವರ ಫೋಟೋವನ್ನು ಮುದ್ರಿಸಬೇಕಾಗಿತ್ತು. ಆದರ ಬದಲು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಫೋಟೋವನ್ನು ಮುದ್ರಿಸಲಾಗಿದೆ.
ಕಾಂಗ್ರೆಸ್ ಪ್ರಚಾರ ಕರಪತ್ರ ರಚನಾ ಸಮಿತಿಯ ಈ ಎಡವಟ್ಟಿಗೆ, ಇಬ್ಬರ ಹೆಸರು ಉದಯಕುಮಾರ್ ಶೆಟ್ಟಿ ಆಗಿರುವುದರಿಂದ ಈ ಪ್ರಮಾದ ಆಗಿದೆ ಎಂದು ಕಾಂಗ್ರೆಸ್ ನಾಯಕರು ಸಮಜಾಯಿಷಿ ನೀಡುತ್ತಿದ್ದಾರೆ.