ಗೋಶಾಲೆ ಮುಚ್ಚದಂತೆ ರೈತ ಸಂಘ ಆಗ್ರಹ

| Published : May 30 2024, 12:45 AM IST / Updated: May 30 2024, 12:46 AM IST

ಸಾರಾಂಶ

ಮೊಳಕಾಲ್ಮುರು ತಾಲೂಕಿನಲ್ಲಿರುವ ಗೋಶಾಲೆಗಳನ್ನು ಮುಚ್ಚದಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರುತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಆರಂಭಿಸಿರುವ ಗೋಶಾಲೆಗಳನ್ನು ಮುಚ್ಚದಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಇಲ್ಲಿನ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಮನವಿ ಸಲ್ಲಿಸಿರುವ ಕಾರ್ಯಕರ್ತರು, ಕಳೆದ ಬಾರಿಯ ಭೀಕರ ಬರದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಕಳೆದೊಂದು ವಾರದಿಂದ ಬಿದ್ದ ಮಳೆಯಿಂದ ಅಲ್ಪ ಮಟ್ಟಿಗೆ ನೆಮ್ಮದಿ ತರಿಸಿದೆ. ಬಾರಿ ಬಿಸಿಲಿಗೆ ಕಾದು ಕಬ್ಬಿಣದಂತಾಗಿದ್ದ ಭೂಮಿ ತುಸು ತಂಪಾಗಿಸಿದೆ. ಇದೆ ನೆಪದಿಂದ ಸರ್ಕಾರ ಗೋಶಾಲೆ ಮುಚ್ಚಲು ಮುಂದಾಗಿರುವುದು ಸಲ್ಲದು ಎಂದಿದ್ದಾರೆ.

ಕೇವಲ ಮುಂಗಾರು ಪೂರ್ವದಲ್ಲಿ ಬಿದ್ದ ಮಳೆ ನೆಚ್ಚಿಕೊಂಡು ಗೋಶಾಲೆ ಮುಚ್ಚಿದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಮೇವು ಇಲ್ಲದೆ ಗೋಶಾಲೆಗಳನ್ನೇ ಅವಲಂಬಿಸಿರುವ ರೈತರ ಬದುಕು ಅತಂತ್ರಕ್ಕೆ ಸಿಲುಕಲಿದೆ. ಮುಂಗಾರು ಪೂರ್ವ ಮಳೆಯಿಂದ ಕೃಷಿ ಚಟುವಟಿಕೆಗಳು ಈಗಷ್ಟೇ ಆರಂಭಗೊಂಡಿದ್ದು, ರೈತರು ಜಮೀನುಗಳ ಕಡೆ ಮುಖ ಮಾಡುತ್ತಿದ್ದಾರೆ. ಗೋಶಾಲೆ ಮುಚ್ಚುವುದರಿಂದ ಜಾನುವಾರುಗಳಿಗೆ ಮೇವು ಒದಗಸುವುದು ತುಂಬಾ ಕಷ್ಟವಾಗುತ್ತದೆ ಎಂದರು.

ತಾಲೂಕಿನ ರಾಂಪುರ, ಮುತ್ತಿಗಾರಹಳ್ಳಿ, ಮಾರಮ್ಮನಹಳ್ಳಿಯ ಗೋಶಾಲೆಗಳಲ್ಲಿ ಹತ್ತಾರು ಹಳ್ಳಿಗಳ ಸಾವಿರಾರು ಜಾನುವಾರು ಆಶ್ರಯಿಸಿಕೊಂಡಿವೆ. ನಿತ್ಯ ರೈತರು ದನಕರು ಮೇಯಿಸಿಕೊಂಡು ಹೋಗುತ್ತಿದ್ದಾರೆ. ಕೇವಲ ಒಂದು ವಾರ ಸುರಿದ ಮಳೆಯಿಂದ ಗೋಶಾಲೆ ಮುಚ್ಚದೆ ಉತ್ತಮ ಮಳೆಯಾಗುವವರೆಗೆ ಗೋಶಾಲೆಗಳನ್ನು ಮುಂದುವರೆಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್, ಪಿ.ಟಿ.ಹಟ್ಟಿ ನಿಂಗಣ್ಣ, ಸೂರಮ್ಮನಹಳ್ಳಿ ಪಾಪಯ್ಯ, ಎ.ವಿಜಯಕುಮಾರ್, ಎ.ಮಂಜುನಾಥ, ಬಿ.ಟಿ.ಈಶ್ವರಪ್ಪ, ಕೆ.ಮಲ್ಲಿಕಾರ್ಜುನ, ಟಿ.ಪಿ.ತಿಪ್ಪೇರುದ್ರಪ್ಪ, ಬಿ.ಎಚ್.ಯಶವಂತ್, ಎಂ.ಬಿ.ಪಾಲಯ್ಯ, ಕುಂಟು ಮಲ್ಲಯ್ಯ, ಮುತ್ತಿಗಾರಹಳ್ಳಿ ಮಲ್ಲಿಕಾರ್ಜುನ, ಟಿ.ಪಿ.ಜಗದೀಶ, ಮಂಜಣ್ಣ, ಮಲ್ಲಯ್ಯ, ಬೋರಯ್ಯ, ಎಂ.ಪಿ.ನಾಗೇಶ, ಪಿ.ಕಾಟಯ್ಯ, ಪಿ.ಬೋರಯ್ಯ, ಗುರುಸ್ವಾಮಿ ಇದ್ದರು.