ಕನ್ನಡಪ್ರಭ ವಾರ್ತೆ ಟಿ. ನರಸೀಪುರತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಬ್ಲ್ಯಾಕ್ ಮೇಲ್ ಹಾಗೂ ಮಾನಸಿಕ ಕಿರುಕುಳದ ಆರೋಪದ ಹಿನ್ನೆಲೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ ಮೃತರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.ಇತ್ತೀಚೆಗಷ್ಟೇ ನಡೆದ ಈ ದುರಂತದಲ್ಲಿ ಮದುವೆ ನಿಶ್ಚಯವಾಗಿದ್ದ ರಕ್ಷಿತಾ, ಆಕೆಯ ತಂದೆ ಶಿವಣ್ಣ ಹಾಗೂ ತಾಯಿ ನಾಗರತ್ನ ಅವರು ಹೊಸದಾಗಿ ನಿರ್ಮಿಸಿದ್ದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಜಿಲ್ಲೆಯಾದ್ಯಂತ ತೀವ್ರ ಆಘಾತ ಮೂಡಿಸಿತ್ತು.ಪ್ರಕರಣದ ಹಿನ್ನೆಲೆ ಕುರಿತು ತಿಳಿದು ಬಂದಿರುವಂತೆ ಅದೇ ಗ್ರಾಮದ ಉಲ್ಲಾಸ್ ಗೌಡ ಎಂಬಾತ ರಕ್ಷಿತಾಳ ಹಳೆಯ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ರಕ್ಷಿತಾಳೊಂದಿಗೆ ತಾನು ಇರುವ ಫೋಟೋಗಳನ್ನು ಆಕೆಯನ್ನು ವಿವಾಹವಾಗಬೇಕಿದ್ದ ಯುವಕನಿಗೆ ಕಳುಹಿಸಿ ಮಾನಸಿಕ ಒತ್ತಡ ಸೃಷ್ಟಿಸಿದ್ದನು. ಇದಲ್ಲದೆ, ರಕ್ಷಿತಾಳ ಕುಟುಂಬ ತಮ್ಮ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದೆ ಎಂದು ಮನೆ ಗೃಹಪ್ರವೇಶ ಮಾಡದಂತೆ ಅಡ್ಡಿಪಡಿಸಿ ಗಲಾಟೆ ನಡೆಸಿ, ಕುಟುಂಬಕ್ಕೆ ನಿರಂತರ ಮಾನಸಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಬೆಳವಣಿಗೆಗಳಿಂದ ಮನನೊಂದ ಕುಟುಂಬ ಆತ್ಮಹತ್ಯೆಗೆ ಶರಣಾಗಿತ್ತು.ಘಟನೆ ಹಿನ್ನೆಲೆ ಎಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕ ಜಿ.ಡಿ. ಹರೀಶ್ ಗೌಡ ಹಾಗೂ ಮಾಜಿ ಶಾಸಕರಾದ ಕೆ.ಮಹದೇವ್, ಎಂ. ಅಶ್ವಿನ್ ಕುಮಾರ್ ಅವರೊಂದಿಗೆ ಮೃತರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ಇದೇ ವೇಳೆ ವರುಣ ಕ್ಷೇತ್ರದ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಕೆಂಪಯ್ಯನಹುಂಡಿ ಬಾಲಕೃಷ್ಣ, ಬಸವರಾಜು ಹಾಗೂ ಇತರ ಮುಖಂಡರಿಂದ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡರು.ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, ಈ ಘಟನೆ ಅತ್ಯಂತ ದುರದೃಷ್ಟಕರ ಹಾಗೂ ನೋವುಂಟು ಮಾಡುವಂತದ್ದು. ಬ್ಲ್ಯಾಕ್ ಮೇಲ್ ಮತ್ತು ಮಾನಸಿಕ ಕಿರುಕುಳದಂತಹ ಕೃತ್ಯಗಳನ್ನು ಸಮಾಜ ಯಾವತ್ತೂ ಸಹಿಸಬಾರದು. ತಪ್ಪಿತಸ್ಥನ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಆಗಬೇಕಿದೆ. ಕಾನೂನಿನ ಕುಣಿಕೆಯಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಎಂದು ಹೇಳಿದರು.ಆದರೆ ಈಗಾಗಲೇ ಸಂಭವಿಸಿರುವ ದುರಂತವನ್ನು ಹಿಂದಕ್ಕೆ ತರಲು ಸಾಧ್ಯವಿಲ್ಲ, ಕುಟುಂಬದಲ್ಲಿ ಉಳಿದಿರುವ ಸದಸ್ಯರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯದಿಂದ ಮುಂದಿನ ಜೀವನವನ್ನು ಸಾಗಿಸಬೇಕು. ಈ ದುಃಖವನ್ನು ಎದುರಿಸುವ ಶಕ್ತಿ ಅವರಿಗೆ ಸಿಗಲಿ ಎಂದು ಅವರು ಸಾಂತ್ವನದ ಮಾತುಗಳನ್ನಾಡಿದರು.ವರುಣ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಅಭಿಷೇಕ್ ಮಣಿಗಾರ್ ಅವರ ವತಿಯಿಂದ ಮೃತರ ಕುಟುಂಬಕ್ಕೆ ಘೋಷಿಸಲಾಗಿದ್ದ ರು. 5 ಲಕ್ಷ ಪರಿಹಾರದ ಚೆಕ್ ಅನ್ನು ಕುಟುಂಬದ ಸದಸ್ಯರಿಗೆ ವಿತರಿಸಲಾಯಿತು.