ಧಾರವಾಡ:

ವಿಶ್ವ ರಕ್ತದಾನಿಗಳ ದಿನದಂಗವಾಗಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ (ಕರ್ನಾಟಕ) ಅಧೀನದಲ್ಲಿರುವ ಡಾ. ಬಿ.ಡಿ. ಜತ್ತಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ಸ್ನಾತಕೋತ್ತರ ಸಂಶೋಧನಾ ಕೇಂದ್ರ ಮತ್ತು ಶ್ರೀ ಸಿ.ಬಿ. ಗುತ್ತಲ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳ ಆಶ್ರಯದಲ್ಲಿ ಶನಿವಾರ ಧಾರವಾಡದ ಪುರುಷೋತ್ತಮ ಭವನದಲ್ಲಿ ಮೆಗಾ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ರಕ್ತದಾನವು ಜೀವ ಉಳಿಸುವ ಮಹಾದಾನ. ಒಬ್ಬ ವ್ಯಕ್ತಿಯ ಸ್ವಯಂಪ್ರೇರಿತ ರಕ್ತದಾನದಿಂದ ಅನೇಕ ಜೀವಗಳಿಗೆ ಹೊಸ ಆಶಾಕಿರಣ ಮೂಡುತ್ತದೆ. ಅಪಘಾತಕ್ಕೊಳಗಾದವರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ತುರ್ತು ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ರಕ್ತದಾನ ಜೀವದಾನವಾಗಿ ಪರಿಣಮಿಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ (ಕರ್ನಾಟಕ) ಕಾರ್ಯಾಧ್ಯಕ್ಷ, ಪಾಲಿಕೆ ಸಭಾನಾಯಕ ಈರೇಶ ಬಿ. ಅಂಚಟಗೇರಿ ಮಾತನಾಡಿ, ಆರೋಗ್ಯವಂತ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡುವ ಸಂಕಲ್ಪ ಕೈಗೊಳ್ಳಬೇಕು. ರಕ್ತದಾನವು ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ಜೀವನದ ಒಂದು ಮೌಲ್ಯವಾಗಿ ರೂಪುಗೊಳ್ಳಬೇಕು. ಸಮಾಜದ ಒಳಿತಿಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಡಾ. ಆನಂದ್ ಜೆ. ಹೊಸೂರು, ಡಾ. ಬಿ.ಎಚ್. ವೆಂಕಟರೆಡ್ಡಿ, ದತ್ತಮೂರ್ತಿ ಕುಲಕರ್ಣಿ, ಅಶೋಕ ಶೆಟ್ಟರ್, ವೀಣಾ ತುಪ್ಪದ, ಡಾ.ಗ್ರೇಟಾ, ಸುಧಾ ಕಾಳೆ, ಮಾಳಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ವೈದ್ಯರು, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಭಾಗವಹಿಸಿ ರಕ್ತದಾನ ಮಾಡಿದರು.