ಕಂಪ್ಲಿ: ಪಟ್ಟಣದ ಬಿಜೆಪಿಯ ತುಂಗಭದ್ರಾ ಕಚೇರಿಯಲ್ಲಿ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಸಂಬಂಧ ಬಿಜೆಪಿಯಿಂದ ಬಿಎಲ್‌ಓ-2 ಕಾರ್ಯಾಗಾರ ಶನಿವಾರ ನಡೆಯಿತು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಸಿ.ಡಿ. ಮಹಾದೇವ ಮಾತನಾಡಿ, ಮತದಾರರ ಪಟ್ಟಿಯ ಶುದ್ಧೀಕರಣವು ಪ್ರಜಾಪ್ರಭುತ್ವದ ಬಲವರ್ಧನೆಗೆ ಅತ್ಯಂತ ಅಗತ್ಯವಾಗಿದೆ. ತಮ್ಮ ಮತಗಳನ್ನು ಸಂರಕ್ಷಿಸಿಕೊಳ್ಳುವುದರ ಜೊತೆಗೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಬಿಎಲ್‌ಓ-2 ಹಗಲಿರುಳು ಶ್ರಮಿಸಬೇಕು. ಮತದಾರರ ಪಟ್ಟಿಯಲ್ಲಿರುವ ನಕಲಿ ಮತದಾರರನ್ನು ಪತ್ತೆಹಚ್ಚಿ ಅವರನ್ನು ಪಟ್ಟಿಯಿಂದ ಹೊರಗಿಡುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕ ಮಾತನಾಡಿ, ಸುಮಾರು 24 ವರ್ಷಗಳ ಬಳಿಕ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭಗೊಂಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ಪ್ರಕ್ರಿಯೆಯಿಂದ ಅರ್ಹ ಮತದಾರರು ಮಾತ್ರ ಪಟ್ಟಿಯಲ್ಲಿ ಉಳಿಯಲಿದ್ದು, ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಹೆಚ್ಚಲಿದೆ ಎಂದರು. ಜಿಲ್ಲೆಯಲ್ಲಿಯೇ ಸುಮಾರು 92 ಸಾವಿರ ಹಾಗೂ ರಾಜ್ಯದಲ್ಲಿ ಸುಮಾರು 86 ಲಕ್ಷ ನಕಲಿ ಮತದಾರರಿರುವ ಸಾಧ್ಯತೆ ಇದೆ. ವಿಶೇಷ ಪರಿಷ್ಕರಣೆ ಪ್ರಕ್ರಿಯೆಯು ಚುನಾವಣೆಗಳ ಜೀವಾಳವಾಗಿದ್ದು, ಇದು ಯಾವುದೇ ಒಂದು ಪಕ್ಷದ ಕೆಲಸವಲ್ಲ, ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕಾದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಟಿ.ಎಚ್. ಸುರೇಶ್‌ಬಾಬು ಮಾತನಾಡಿ, ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿನ ನಕಲಿ, ಡಬಲ್ ಎಂಟ್ರಿ, ಸ್ಥಳಾಂತರಗೊಂಡ ಹಾಗೂ ಅಮಾನ್ಯ ಮತದಾರರ ಹೆಸರುಗಳನ್ನು ಗುರುತಿಸಿ ತೆಗೆದುಹಾಕುವ ಮಹತ್ವದ ಕಾರ್ಯವನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಚುನಾವಣಾ ಆಯೋಗದೊಂದಿಗೆ ಕೈಜೋಡಿಸಬೇಕಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಉದ್ದೇಶದಿಂದ ಪಕ್ಷದ ಕೇಂದ್ರ ಹೈಕಮಾಂಡ್ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಮತದಾರರ ಪಟ್ಟಿಯ ಶುದ್ಧೀಕರಣವು ಅದರಲ್ಲಿ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.


ಕಾರ್ಯಾಗಾರದಲ್ಲಿ ಜಿಲ್ಲಾ ಸಂಚಾಲಕ ಗಾಳಿ ಶಂಕ್ರಪ್ಪ, ಬಿಎಲ್‌ಎ-1 ಗೊರ್ತಿ ಶ್ರೀನಿವಾಸ, ಬಿಜೆಪಿ ಮುಖಂಡರಾದ ರಂಗಳ್ಳಿ ತಿಮ್ಮಾರೆಡ್ಡಿ, ಅಳ್ಳಳ್ಳಿ ವೀರೇಶ್, ಮದಿರೆ ಕುಮಾರಸ್ವಾಮಿ, ಮನೋಜಗೌಡ, ಟಿ. ರಬಿಯಾ ನಿಸಾರ್, ಕಟ್ಟೆ ವಿಶ್ವನಾಥ, ಭಾಸ್ಕರ್, ಬಸವಪ್ರಭು, ಕನಕಗಿರಿ ಪ್ರಶಾಂತ ಸೇರಿದಂತೆ ಬಿಎಲ್‌ಎ-2 ಸದಸ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.