ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಈ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ಬೆಳಿಗ್ಗೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಶೋಧ ಕಾರ್ಯ ನಡೆಸಿತು.ಶಿವಮೊಗ್ಗ ನ್ಯಾಯಾಲಯದ ಸಂಕೀರ್ಣದಲ್ಲಿ ಬಾಂಬ್ ಇಡಲಾಗಿದೆ ಎಂದು ಅಜ್ಮಲ್ ಕಸಬ್ ಎಂಬಾತನ ಇ-ಮೇಲ್ ಮೂಲಕ ಬೆದರಿಕೆ ಬಂದ ತಕ್ಷಣ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಯು, ಶ್ವಾನದಳ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ನಡೆಸಿದರು.
ಮಂಗಳವಾರ ಮಧ್ಯರಾತ್ರಿ 1.37 ಗಂಟೆಗೆ ನ್ಯಾಯಾಲಯದ ಇ ಮೇಲ್ ಗೆ ಬಂದಿದ್ದ ಬೆದರಿಕೆ ಸಂದೇಶದಿಂದ ಬುಧವಾರ ಬೆಳಗ್ಗೆಯಿಂದಲೇ ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಸಾರ್ವಜನಿಕರಲ್ಲಿ ಆತಂಕಕ್ಕೆ ಒಳಗಾಗುವಂತಾದರು.ತಕ್ಷಣ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಹಿರಿಯ ಶಿರಸ್ತೇದಾರರು ಮತ್ತು ಆಡಳಿತಾಽಕಾರಿಗಳು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ,ರಕ್ಷಣೆ ನೀಡುವಂತೆ ಕೋರಿದರು.
ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಯು ಸ್ಳಳಕ್ಕೆ ಆಗಮಿಸಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದರು.
ಆನಂತರ ಶ್ವಾನದಳ ಹಾಗೂ ವಿಧ್ವಂಸಕ ಕೃತ್ಯಗಳ ವಿರೋಽ ತಪಾಸಣಾದ ತಂಡವನ್ನು ಸ್ಥಳಕ್ಕೆ ಕರೆಸಿ ನ್ಯಾಯಾಲಯದ ಕಟ್ಟಡ, ನ್ಯಾಯಾಂಗ ಕೊಠಡಿಗಳು, ವಾಹನ ನಿಲುಗಡೆ ಪ್ರದೇಶ, ಕ್ಯಾಂಟೀನ್ ಗಳು ಹಾಗೂ ಸಾರ್ವಜನಿಕರು ಸಂಚರಿಸುವ ಸ್ಥಳಗಳಲ್ಲಿ ಸಮಗ್ರ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಪೋಟಕ ಪತ್ತೆಯಾಗಲಿಲ್ಲ. ಹಾಗಾಗಿ ಇದೊಂದು ಹುಸಿಬಾಂಬ್ ಬೆದರಿಕೆ ಎನ್ನುವುದು ಮೆಲ್ನೋಟಕ್ಕೆ ತಿಳಿದು ಬಂದಿದೆ.
ಬಾಂಬ್ ಬೆದರಿಕೆ ಹಿನ್ನೆಲೆ ನ್ಯಾಯಾಲಯದ ಕಾರ್ಯ ಚಟುವಟಿಕೆಗಳು ಎಂದಿನಂತೆ ನಡೆದಿದ್ದು, ಭದ್ರತಾ ಪರಿಶೀಲನೆ ಬಳಿಕ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ವಿವಿಧ ಜಿಲ್ಲೆಗಳ ನ್ಯಾಯಾಧೀಶರೇ ಗುರಿ
ಕಳೆದ ಎರಡು ತಿಂಗಳಿಂದ ರಾಜ್ಯದ ವಿವಿಧ ಜಿಲ್ಲೆಗಳ ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಇಂತಹ ಘಟನೆಗಳು ನಡೆಯುತ್ತಿವೆ ಎಂದು ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ್ ಹೇಳಿದರು.ಶಿವಮೊಗ್ಗ ಕೋರ್ಟ್ ಗೆ ಬಾಂಬ್ ಬೆದರಿಕೆ ಮೇಲ್ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಹಲವು ಜಿಲ್ಲಾ ನ್ಯಾಯಾಧೀಶರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ನಕಲಿ ಮೊಬೈಲ್ ಸಂಖ್ಯೆಗಳ ಮೂಲಕ ವಕೀಲರು, ನ್ಯಾಯಾಲಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಹಣದ ಸಹಾಯ ಕೇಳುವ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಬ್ಯಾಂಕ್ ಸಮಸ್ಯೆ ಇದೆ ಎಂದು ಹೇಳಿ 50 ಸಾವಿರ ಹಣ ರು. ಕಳುಹಿಸುವಂತೆ ಮನವಿ ಮಾಡಲಾಗುತ್ತಿದೆ. ಈ ರೀತಿಯ ಪ್ರಕರಣಗಳು ಮೊದಲು ಚಿಕ್ಕಬಳ್ಳಾಪುರದಲ್ಲಿ ಆರಂಭವಾಗಿ, ಬಳಿಕ ಹಾಸನ, ಗದಗ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರದಿಯಾಗಿವೆ ಎಂದು ತಿಳಿಸಿದರು.
ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖಇನ್ನು, ಬೆದರಿಕೆ ಹಾಕಿ ಬಂದಿರುವ ಇ ಮೇಲ್‌ನಲ್ಲಿ ತಮಿಳುನಾಡು ಮಾಜಿ ಸಿಎಂ ಪುತ್ರ ಉದಯನಿಧಿ ಸ್ಟಾಲಿನ್ ಅವರ ಹೆಸರು ಉಲ್ಲೇಖವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದ್ದಾರೆ.
ಮೊದಲ ಸಾಲಿನಲ್ಲೇ ಶಿವಮೊಗ್ಗ ಜಿಲ್ಲಾ ನ್ಯಾಯಾಲಯವನ್ನು ಉಡಾಯಿಸುವುದಾಗಿ ಬೆದರಿಕೆ ಹಾಕಲಾಗಿದೆ. ನಂತರದಲ್ಲಿ ಉದಯನಿಧಿ ಸ್ಟಾಲಿನ್ ಅವರ ವಿರುದ್ಧದ ಒಂದು ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬುದನ್ನು ಉಲ್ಲೇಖಿಸಲಾಗಿದೆ ಎಂದಿದ್ದಾರೆ.ಯಾವ ಪ್ರಕರಣ ಎಂಬುದರ ಕುರಿತಾಗಿ ನಮಗೆ ಯಾವುದೇ ರೀತಿಯಲ್ಲೂ ಸಹ ಮಾಹಿತಿಯಿಲ್ಲ. ಚೆನ್ನೈ ನಗರದಲ್ಲಿನ ಪ್ರಕರಣವನ್ನು ಇಲ್ಲಿಗೆ ಲಿಂಕ್ ಮಾಡಲಾಗಿದೆ. ಹೀಗಾಗಿ, ತಮಿಳುನಾಡು ಪೊಲೀಸರೊಂದಿಗೆ ಚರ್ಚಿಸಿ, ಮುಂದಿನ ತನಿಖೆಯನ್ನು ಚುರುಕುಗೊಳಿಸಲಾಗುವುದು ಎಂದರು.
ಅಲ್ಲದೇ, ಉಡುಪಿ ಸೇರಿದಂತೆ ಬೇರೆ ಜಿಲ್ಲೆಗಳ ನ್ಯಾಯಾಲಯಕ್ಕೂ ಸಹ ಇದೇ ರೀತಿಯಲ್ಲಿ ಬೆದರಿಕೆ ಇ ಮೇಲ್ ಬಂದಿದೆ ಎಂಬ ಮಾಹಿತಿ ಇದೆ. ಗ್ಯಾಸ್ ಸಿಲಿಂಡರ್ ಬಳಸಿ ಸ್ಪೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಆದರೆ, ನಮ್ಮ ಸಿಬ್ಬಂದಿ ಸಂಪೂರ್ಣ ತಪಾಸಣೆ ನಡೆಸಿದ್ದು, ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ದೊರೆತಿಲ್ಲ ಎಂದರು.ಹುಸಿ ಬಾಂಬ್ ಕರೆ:
ಜಿಲ್ಲಾ ನ್ಯಾಯಾಲಯವನ್ನು ಬಾಂಬ್ ಮೂಲಕ ಉಡಾಯಿಸುವುದಾಗಿ ಬಂದ ಇ ಮೇಲ್ ಒಂದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಹೇಳಿದ್ದಾರೆ.ಬುಧವಾರ ಮಧ್ಯರಾತ್ರಿ 1.37ಕ್ಕೆ ಇ ಮೇಲ್ ಮೂಲಕ ಬೆದರಿಕೆ ಬಂದಿದ್ದು, ಮೊದಲ ಸಾಲಿನಲ್ಲೇ ಶಿವಮೊಗ್ಗ ಜಿಲ್ಲಾ ನ್ಯಾಯಾಲಯವನ್ನು ಉಡಾಯಿಸುವುದಾಗಿ ಹೇಳಲಾಗಿದೆ. ಈ ವಿಚಾರ ತಿಳಿದಾಕ್ಷಣ ಎಸಿ ತಂಡ, ಅಧಿಕಾರಿ ಹಾಗೂ ಸಿಬ್ಬಂದಿಗಳು, ಎಂಎಫ್‌ಎಂಡಿ, ಎಚ್‌ಎಚ್‌ಎಡಿ ಹಾಕಲಾಗಿದ್ದು, ನ್ಯಾಯಾಲಯ ಕಟ್ಟಡಕ್ಕೆ ತೆರಳಿ ಸಂಪೂರ್ಣ ತಪಾಸಣೆ ನಡೆಸುತ್ತಿದೆ ಎಂದರು.