ಕನ್ನಡಪ್ರಭ ವಾರ್ತೆ ದಾವಣಗೆರೆ
ನೀಟ್ ಯುಜಿ 2026 ಪರೀಕ್ಷೆಯಲ್ಲಿ ಆದ ಅವಾಂತರ ಹಾಗೂ ಅಕ್ರಮಕ್ಕೆ ಕಾರಣರಾದವರನ್ನು ಪತ್ತೆ ಮಾಡಿ, ನಿದರ್ಶನೀಯ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಎಐಡಿಎಸ್‌ಒ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟಿಸಿದ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನೀಟ್ ಯುಜಿ 2026 ಪರೀಕ್ಷೆಯಲ್ಲಿ ಆಗ ಅವಾಂತರ, ಅಕ್ರಮಕ್ಕೆ ಕಾರಣರಾದವರ ವಿರುದ್ಧ ಅತ್ಯಂತ ಕಠಿಣ ಕ್ರಮಕ್ಕೆ ಒತ್ತಾಯಿಸಿ ಘೋಷಣೆ ಕೂಗುತ್ತ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಇಡೀ ದೇಶಾದ್ಯಂತ ಜನರ ಮನಸ್ಸನ್ನು ಘಾಸಿಗೊಳಿಸಿರುವುದು ಕಳೆದ 4 ದಿನಗಳಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ದಿನದಿನಕ್ಕೂ ಶಿಕ್ಷಣದ ಖಾಸಗೀಕರಣ ಹಾಗೂ ವ್ಯಾಪಾರೀಕರಣಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ಆಕ್ರೋಶ ಹೊರ ಹಾಕಿದರು.ದೇಶಾದ್ಯಂತ ವ್ಯಾಪಿಸಿರುವ ನೀಟ್ ಪರೀಕ್ಷೆಯು ಬಡ ಮತ್ತು ಮಧ್ಯಮ ವರ್ಗದ ಮಕ್ಕಳನ್ನು ಉನ್ನತ ಶಿಕ್ಷಣದಿಂದ, ವೈದ್ಯಕೀಯ ಶಿಕ್ಷಣದಿಂದಲೇ ದೂರ ಮಾಡುತ್ತಿವೆ. ಕಳೆದ 3 ವರ್ಷಗಳಲ್ಲಿನೀಟ್ ಪರೀಕ್ಷೆಯಲ್ಲಿ ಎರಡು ಸಲ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ನಾಚಿಕೆಗೇಡಿನ ಸಂಗತಿ. ಇಂದು ಕೋಚಿಂಗ್ ಮಾಫಿಯಾಗಳ ಕೈಗೊಂಬೆಯಾಗಿರುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮೂಲಕ ಏಕೆ ಸರ್ಕಾರ ಇಂತಹ ಪರೀಕ್ಷೆ ನಡೆಸಬೇಕು ಎಂದು ಪ್ರಶ್ನಿಸಿದರು.
ಸರ್ಕಾರವೇ ಖುದ್ದಾಗಿ ತನ್ನದೇ ಉಸ್ತುವಾರಿಯಲ್ಲಿ ಇಂತಹ ಪರೀಕ್ಷೆಗಳನ್ನು ನಡೆಸುವ ಜವಾಬ್ಧಾರಿಯನ್ನು ತೆಗೆದುಕೊಳ್ಳಲು ಯಾಕೆ ವಿಫಲವಾಗುತ್ತಿದೆ? ವಿದ್ಯಾರ್ಥಿಗಳು ಎರಡು ನಿಮಿಷ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಿದರೆ, ಅಂತಹ ಮಕ್ಕಳಿಗೆ ಪರೀಕ್ಷೆ ನೀಡಲು ನಿರಾಕರಿಸಿದ ಆಡಳಿತವು ತನ್ನ ಜವಾಬ್ಧಾರಿಯನ್ನು ಇದೇ ದಕ್ಷತೆಯಿಂದಲೂ ನಡೆಸಿಕೊಡಬೇಕಲ್ಲವೆ? ತನ್ನ ಲೋಪ ಮರೆ ಮಾಚಲು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಏಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘಟನೆ ಕಾರ್ಯದರ್ಶಿ ಟಿ.ಎಸ್.ಸುಮನ್, ಸಂಘಟನೆ ಪದಾಧಿಕಾರಿಗಳು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯಾವುದೇ ಸರ್ಕಾರ ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ಧಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು, ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ, ಉದ್ಯೋಗವನ್ನು ಖಾತರಿಪಡಿಸಬೇಕು. ಇಂದು ಜನರ ನಂಬಿಕೆಗೆ ದ್ರೋಹ ಬಗೆಯುವ ಕೆಲಸವನ್ನೇ ಆಳುವ ಸರ್ಕಾರಗಳು ಮಾಡುತ್ತಿವೆ. ವ್ಯವಸ್ಥೆಯ ವೈಫಲ್ಯವನ್ನು ವಿದ್ಯಾರ್ಥಿಗಳು, ಜನ ಸಾಮಾನ್ಯರು ಗ್ರಹಿಸಿ, ಸಂಪೂರ್ಣ ಬದಲಾವಣೆಗೆ ಮುಂದಾಗಬೇಕು.ಟಿ.ಎಸ್.ಸುಮನ್ ಕಾರ್ಯದರ್ಶಿ, ಎಐಡಿಎಸ್‌ಒ