ಕನ್ನಡಪ್ರಭ ವಾರ್ತೆ ಶಿರಾ
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಾಯಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಂಗಳೂರು ಕೃಷಿ ನಿರ್ದೇಶಕ ಜಿ.ಟಿ.ಪುತ್ರ ಹೇಳಿದರು.ತಾಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯ ಕರಪತ್ರ ಮತ್ತು ಹಸ್ತ ಪ್ರತಿಗಳನ್ನು ಬಿಡುಗಡೆ ಮಾಡಿ, ಪರ್ಯಾಯ ಬೆಳೆ, ಸಮತೋಲನ ಗೊಬ್ಬರ ಬಳಕೆ, ಖೇತ್ ಬಚಾವೋ ಮತ್ತು ಕೃಷಿ ಭಾಗ್ಯ ಯೋಜನೆಗಳ ಕುರಿತಾದ ಆಟೋ ಮೂಲಕ ಪ್ರಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮೊಬೈಲ್ ಮೂಲಕ ರಸಗೊಬ್ಬರ ಬುಕ್ಕಿಂಗ್ ಮಾಡಿ ಖರೀದಿಸಲು ಅನುಕೂಲವಾಗುವ ಆ್ಯಪ್ ಇದ್ದು ರೈತರಿಗೆ ಆಯಾ ಬೆಳೆಗಳಿಗೆ ಅವಶ್ಯಕತೆಗೆ ತಕ್ಕಂತೆ ವೈಜ್ಞಾನಿಕವಾಗಿ ಸಮತೋಲನ ಗೊಬ್ಬರ ಶಿಫಾರಸು ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಭೂ ಫಲವತ್ತತೆ ಕಾಪಾಡಿಕೊಂಡು ಹೆಚ್ಚಿನ ಇಳುವರಿ ಹಾಗೂ ಆದಾಯ ಪಡೆಯ ಬಹುದು. ಮನೆಯಲ್ಲಿಯೇ ಕುಳಿತು ಹತ್ತಿರದ ಡೀಲರ್ ಗಳಲ್ಲಿ ರಸಗೊಬ್ಬರ ಬುಕ್ಕಿಂಗ್ ಮಾಡಬಹುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ರೈತರಿಗೆ ಸಹಾಯಧನದಡಿ ರಾಗಿ ಬಿತ್ತನೆ ಬೀಜ ವಿತರಿಸಿದರು. ಕೃಷಿ ಭಾಗ್ಯ ಯೋಜನೆಯಡಿ ರೈತರು ನಿರ್ಮಿಸಿದ ಕೃಷಿ ಹೊಂಡ ತಪಾಸಣೆ ಮಾಡಿದರು. ಪ್ಯಾಕೇಜ್ ಮಾದರಿಯಲ್ಲಿ ಸಹಾಯಧನದಡಿ ಕೃಷಿ ಹೊಂಡ, ಟಾರ್ಪಾಲಿನ ಹೊದಿಕೆ, ತಂತಿ ಬೇಲಿ, ಡಿಸೈಲ್ ಪಂಪ್ ಸೆಟ್ ಮತ್ತು ಸ್ಪ್ರಿಂಕ್ಲರ್ ಸದುಪಯೋಗ ಪಡೆದುಕೊಳ್ಳಬೇಕೆಂದು ರೈತರಲ್ಲಿ ಮನವಿ ಮಾಡಿದರು.
ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಎಸ್ ಕಳ್ಳೆನ್ನವರ ಮಾತನಾಡಿ ಪರ್ಯಾಯ ಬೆಳೆ ಯೋಜನೆ ಕುರಿತು ತಿಳಿಸಿ ಜುಲೈ ಮಾಹೆಯಲ್ಲಿ ರಾಗಿ, ತೊಗರಿ ಮತ್ತು ಶೇಂಗಾ ಬಿತ್ತನೆ ಮಾಡಲು ಹಾಗೂ ಆಗಸ್ಟ್ ತಿಂಗಳಲ್ಲಿ ರಾಗಿ, ನವಣೆ, ಸಾಮೆ, ಮತ್ತು ಹುರುಳಿ ಬಿತ್ತನೆ ಮಾಡಲು ತಿಳಿಸಿದರು. ಸಾವಯವ ಕೃಷಿ, ನೈಸರ್ಗಿಕ ಕೃಷಿ, ಜೈವಿಕ ಗೊಬ್ಬರ, ಸುಸ್ತಿರ ಕೃಷಿ ಹಾಗೂ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಶಿರಾದಲ್ಲಿ ಪಿ.ಎಂ.ಎಫ್.ಎಂ.ಇ. ಯೋಜನೆಯಡಿ ಸಹಾಯಧನದಡಿ ಸ್ಥಾಪಿಸಿದ ಹಪ್ಪಳ ತಯಾರಿಕೆ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕ ಹುಲಿರಾಜ, ಚಂದ್ರಕುಮಾರ, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜ, ಕೃಷಿ ಅಧಿಕಾರಿಗಳಾದ ಸತ್ಯನಾರಾಯಣ, ನಟರಾಜ, ಇಫ್ಕೊ - ಟೋಕಿಯ ಇನ್ಶೂರೆನ್ಸ್ ಜಿಲ್ಲಾ ಯೋಜನಾಧಿಕಾರಿ ಮಂಜುನಾಥ್, ಆತ್ಮ ಯೋಜನೆಯ ರಕ್ಷಿತಾ, ಆತ್ಮ ವಿಭಾಗ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ನೂರಸ್ಮಾ , ತಾವರೆಕೆರೆ ರೈತ ಸಂಪರ್ಕ ಕೇಂದ್ರದ ಮಮತಾ ಸೇರಿದಂತೆ ರೈತರು ಹಾಜರಿದ್ದರು.