ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿ ಶುಕ್ರವಾರ ಶ್ರೀರಾಮದೇವರ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆ ಮತ್ತು ಸಂಭ್ರಮದಿಂದ ಜರುಗಿತು. ಉತ್ಸವಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮೆರವಣಿಗೆಯಲ್ಲಿ ಶಾಸಕ ಡಿ.ರವಿಶಂಕರ್ ಅವರ ನೇತೃತ್ವದಲ್ಲಿ ವೇದ ಘೋಷದೊಂದಿಗೆ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ತಾಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿ ಶುಕ್ರವಾರ ಶ್ರೀರಾಮದೇವರ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆ ಮತ್ತು ಸಂಭ್ರಮದಿಂದ ಜರುಗಿತು.

ಬೆಳಗ್ಗ 11.30ರ ಸಮಯದಲ್ಲಿ ಶ್ರೀ ರಾಮದೇವಾಲಯದಿಂದ ಉತ್ಸವಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮೆರವಣಿಗೆಯಲ್ಲಿ ಶಾಸಕ ಡಿ.ರವಿಶಂಕರ್ ಅವರ ನೇತೃತ್ವದಲ್ಲಿ ವೇದ ಘೋಷದೊಂದಿಗೆ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಮಧ್ಯಾಹ್ನ 12ರ ವೇಳೆಗೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಗಾವಡಗೆರೆ ಗುರುಲಿಂಗ ಜಂಗಮದೇವರ ಮಠದ ನಟರಾಜ ಶ್ರೀ, ಬೆಟ್ಟದಪುರದ ವಿರಕ್ತ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಶಾಸಕ ಡಿ. ರವಿಶಂಕರ್ ಮತ್ತು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ನೆರೆದಿದ್ದ ಭಕ್ತರು ದೇವರಿಗೆ ಜೈಕಾರ ಕೂಗಿ ರಥವನ್ನು ದೇವಾಲಯದ ಸುತ್ತು ಎಳೆದರು.

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮತ್ತು ಸ್ಥಳೀಯ ಭಕ್ತರು ದೇವರಿಗೆ ಬಾಳೆ ಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ಇದಕ್ಕೂ ಮುನ್ನ ಭಕ್ತಾದಿಗಳು ದೇವಾಲಯದಲ್ಲಿ ಸರತಿಯಲ್ಲಿ ಸೀತಾ ಸಮೇತ ಶ್ರೀರಾಮ ಮತ್ತು ಲಕ್ಷ್ಮಣ ದೇವರ ದರ್ಶನ ಪಡೆದರು.

ಬಸವನ ವೃತ್ತದಿಂದ ಶ್ರೀರಾಮ ದೇವಾಲಯದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಸಿಹಿ ತಿಂಡಿ ಮತ್ತು ವಿವಿಧ ಆಟಿಕೆಯ ಅಂಗಡಿಗಳು ಗಮನ ಸೆಳೆದವು. ಶ್ರೀರಾಮ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಾಸಕ ಡಿ. ರವಿಶಂಕರ್ ಅವರು ಅನ್ನ ಸಂತರ್ಪಣೆ ಏರ್ಪಡಿಸಿದ್ದರು.

ಜಾತ್ರೆಗೆ ಬೆಳಗ್ಗೆಯಿಂದ ಸಂಜೆಯವಗೂ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸಾಲಿಗ್ರಾಮ ಪೊಲೀಸ್ ಇನ್‌ಸ್ಪೆಕ್ಟರ್‌ ಶಶಿಕುಮಾರ್ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರಥಮ ಬಾರಿಗೆ ಚುಂಚನಟ್ಟೆ ಮತ್ತು ಹೊಸೂರು ಗ್ರಾಮದಲ್ಲಿರುವ ಬಾರ್ ಗಳನ್ನು ಬಂದ್ ಮಾಡಿಸಲಾಗಿತ್ತು. ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಕುಪ್ಪೆ ಗ್ರಾಪಂ ಅಧ್ಯಕ್ಷೆ ಶಾರದಮ್ಮ, ತಹಸೀಲ್ದಾರ್ ರುಕಿಯಾ ಬೇಗಂ, ಶಿರಸ್ತೆದಾರ್ ಆರ್.ಎ. ಮಹೇಶ್, ಉಪ ತಹಸೀಲ್ದಾರ್ ಮಹೇಶ್, ಆರ್‌ಐ ಚಿದಾನಂದ್, ಪಾರುಪತ್ತೇದಾರ್‌ ಯತಿರಾಜ್ ಇದ್ದರು.