ಬುದ್ಧಿವಂತ, ಚಾರಿತ್ರ್ಯವಂತ ಹಾಗೂ ಕ್ರಿಯಾಶೀಲರಾದ ಬ್ರಾಹ್ಮಣ ಸಮುದಾಯದವರು ಇತ್ತೀಚಿನ ದಿನಗಳಲ್ಲಿ ಸಮಾಜಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅತಿ ವಿರಳವಾಗುತ್ತಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬುದ್ಧಿವಂತ, ಚಾರಿತ್ರ್ಯವಂತ ಹಾಗೂ ಕ್ರಿಯಾಶೀಲರಾದ ಬ್ರಾಹ್ಮಣ ಸಮುದಾಯದವರು ಇತ್ತೀಚಿನ ದಿನಗಳಲ್ಲಿ ಸಮಾಜಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅತಿ ವಿರಳವಾಗುತ್ತಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದಿಂದ ಭಾನುವಾರ ಚಾಮರಾಜಪೇಟೆಯ ಗಾಯನ ಸಮಾಜದಲ್ಲಿ ಆಯೋಜಿಸಿದ್ದ ವಿಪ್ರೋತ್ಸವ-2026ರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಣರ ಇತಿಹಾಸ ಬಹಳ ದೊಡ್ಡದಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಅಪ್ರತಿಮವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರು ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ಹೆಚ್ಚಾಗಿ ಕಾಣಿಸುತ್ತಿಲ್ಲ. ವಿಧಾನಸಭೆಯಲ್ಲಿ ಕೇವಲ 3 ಮಂದಿ ಶಾಸಕರಿದ್ದೇವೆ. ದಿನದ 24 ಗಂಟೆ ರಾಜಕೀಯ ಮಾಡಬೇಕೆಂದು ಹೇಳುತ್ತಿಲ್ಲ. ಸಮುದಾಯ ಕ್ಷೇಮಾಭಿವೃದ್ಧಿಯ ದೃಷ್ಠಿಯಿಂದ ಸಮಾಜಸೇವೆ ಮತ್ತು ರಾಜಕೀಯದಲ್ಲಿ ಸಕ್ರಿಯರಾಗಬೇಕು ಎಂದು ಹೇಳಿದರು.
ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ 1970 ರಿಂದ ಸತತವಾಗಿ ಶಾಸಕನಾಗಿ ಆಯ್ಕೆಯಾಗಿ ಬರುತ್ತಿದ್ದೇನೆ. ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ 2 ಸಾವಿರ ಮತ ಇಲ್ಲ. ಆದರೂ ನಿರಂತರವಾಗಿ ಆಯ್ಕೆ ಆಗುತ್ತಿದ್ದೇನೆ. ಗುರಿ, ನಿಷ್ಠೆ, ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆ ದಿಕ್ಕಿನ ಕಡೆಗೆ ಎಲ್ಲರೂ ಹೆಜ್ಜೆ ಹಾಕಬೇಕು ಎಂದರು.ಇದೇ ವೇಳೆ ಹಿರಿಯ ನಟ ಶ್ರೀನಾಥ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಸಮಾಜ ಸೇವಕಿ ಆಶಾ ದಿನೇಶ್, ವಿದ್ಯಾವಾಚಸ್ಪತಿ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಹಾಗೂ ಜಿ.ಶ್ರೀನಿವಾಸ್ ರಾವ್ ಅವರಿಗೆ 2026ನೇ ಸಾಲಿನ ‘ಭಾರ್ಗವ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯುವ ಕ್ರಿಕೆಟ್ ತಾರೆ ರಚಿತಾ ಅತ್ವರ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮೈಸೂರಿನ ಅರ್ಜುನ ಅವಧೂತ ಗುರೂಜಿ, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಗೋವಿಂದ ಕುಲಕರ್ಣಿ, ಪರಿಸರವಾದಿ ರೇವತಿ ಕಾಮತ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ, ಶಾಸಕರಾದ ಸಿ.ಕೆ.ರಾಮಮೂರ್ತಿ ಹಾಗೂ ಸವದತ್ತಿ ಡಾ.ವಿಶ್ವಾಸ್ ವೈದ್ಯ ಸೇರಿದಂತೆ ಮೊದಲಾದವರಿದ್ದರು.5 ವರ್ಷ ಸಂಧ್ಯಾವಂದನೆ
ಮಾಡಿದರೆ ಶಿಕ್ಷಣ ಉಚಿತ ಎಂಟು ವರ್ಷಕ್ಕೆ ಉಪನಯನ ಪಡೆಯುವ ಸಮುದಾಯದ ಮಕ್ಕಳು, ನಂತರದ 5 ವರ್ಷ ಪ್ರತಿನಿತ್ಯ ಸಂಧ್ಯಾವಂದನೆ ಮಾಡಿದರೆ ಅವರ ಮುಂದಿನ ಎಲ್ಲ ಶೈಕ್ಷಣಿಕ ವೆಚ್ಚವನ್ನು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ವಹಿಸಿಕೊಳ್ಳಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಪ್ರದೀಪ್ ಹೇಳಿದರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಕ್ರಮ ವಹಿಸುವುದಕ್ಕೆ ಸಂಘದಿಂದ ಪರಶುರಾಮ ಕಾನೂನು ಕೋಶ ಆರಂಭಿಸಲಾಗಿದೆ. ಸಮುದಾಯದ ಯುವತಿಯರು ಅನ್ಯಜಾತಿ ವಿವಾಹ ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಪರಶುರಾಮ ಜಾಗೃತಿ ತಂಡ ರಚಿಸಲಾಗುತ್ತಿದೆ. ಈ ತಂಡವು ರಾಜ್ಯಾದ್ಯಂತ ಜಾಗೃತಿ, ಅರಿವು ಮೂಡಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು.