ಬಂಟ್ವಾಳ: ಉಪ್ಪಿನಂಗಡಿ ಬಳಿ ನೂತನ ಟೋಲ್‌ಗೇಟ್ ಆರಂಭಗೊಂಡಿರುವುದನ್ನು ವಿರೋಧಿಸಿ, ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಟೋಲ್‌ಗೇಟ್‌ಗೆ ಎಸ್‌ಡಿಪಿಐ ಕಾರ್ಯಕರ್ತರು ಮುತ್ತಿಗೆ ಹಾಕಿ ದಾಂದಲೆ ನಡೆಸಿದ ಘಟನೆ ಗುರುವಾರ ನಡೆದಿದೆ.

ಇದ್ದಕ್ಕಿದ್ದಂತೆ ಟೋಲ್‌ಗೇಟ್‌ಗೆ ನುಗ್ಗಿದ ಕಾರ್ಯಕರ್ತರು ಟೋಲ್ ಸಂಗ್ರಹಕ್ಕೆ ಅಡ್ಡಿಪಡಿಸಿ, ವಾಹನಗಳನ್ನು ಶುಲ್ಕ ಪಾವತಿಸದೆ ತೆರಳಲು ಅವಕಾಶ ಮಾಡಿಕೊಟ್ಟರು ಎನ್ನಲಾಗಿದೆ. ಈ ವೇಳೆ ಟೋಲ್‌ನ ಕ್ಯಾಮೆರಾಗಳಿಗೆ ಹಾನಿ ಮಾಡಿದ್ದು, ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಟೋಲ್‌ನ ಬೂಮ್ ಬ್ಯಾರಿಯರ್‌ಗಳನ್ನು ಕಿತ್ತುಹಾಕಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದರು ಎನ್ನಲಾಗಿದೆ.ಉಪ್ಪಿನಂಗಡಿ ಸಮೀಪ ನೂತನ ಟೋಲ್ ಆರಂಭಗೊಂಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಕಾರ್ಯಕರ್ತರು ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಪ್ರತಿಭಟನೆ ನಡೆಸಿದರು.ಘಟನೆಯ ಮಾಹಿತಿ ತಿಳಿದು ಬಂಟ್ವಾಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಟೋಲ್ ಆವರಣದಲ್ಲಿದ್ದ ಎಸ್‌ಡಿಪಿಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಂಟ್ವಾಳ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.