ಕೇಂದ್ರ ಸರ್ಕಾರದ ಯೋಜನೆಗಳಿಗೆ ಬ್ಯಾಂಕ್ ಸಾಲ ನೀಡುವುದರಲ್ಲಿ ಎಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂಬ ಬಗ್ಗೆ ಕಾರಣ ಸಹಿತ ವರದಿ ಸಲ್ಲಿಸುವಂತೆ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳೂರು: ಕೇಂದ್ರ ಸರ್ಕಾರದ ಯೋಜನೆಗಳಿಗೆ ಬ್ಯಾಂಕ್ ಸಾಲ ನೀಡುವುದರಲ್ಲಿ ಎಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂಬ ಬಗ್ಗೆ ಕಾರಣ ಸಹಿತ ವರದಿ ಸಲ್ಲಿಸುವಂತೆ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾ ಸಮಾಲೋಚನಾ ಸಮಿತಿ (ಡಿಸಿಸಿ) ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೇಂದ್ರ ಸರ್ಕಾರದ ಯೋಜನೆಗಳಿಗೆ ಬ್ಯಾಂಕ್ ಸಾಲ ನೀಡುವ ವೇಳೆ ಸಲ್ಲಿಕೆಯಾಗುವ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆ ಭಾಗದಿಂದ ದೂರು ಇದೆ. ಆರ್‌ಬಿಐ ಕೆಲವು ನಿಯಮ ಸಡಿಲ ಮಾಡಿದೆ. ಆದರೂ ಅಂತಹ ಸಡಿಲಿಕೆ ಪರಿಗಣಿಸದೇ ಅರ್ಜಿಗಳನ್ನು ತಿರಸ್ಕರಿಸುವ ಬ್ಯಾಂಕ್‌ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಹಾಗೂ ಸಿಬಿಲ್, ಕ್ರೆಡಿಟ್, ದಾಖಲೆ ವಿಚಾರದಲ್ಲಿ ಎಷ್ಟು ಅರ್ಜಿಗಳು ತಿರಸ್ಕಾರ ಆಗಿದೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಬಡವರಿಗಾಗಿ ಕೇಂದ್ರ ಸರ್ಕಾರ ಯೋಜನೆಗಳನ್ನು ತಂದರೂ ಅದರಲ್ಲೂ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿರುವ ದೂರು ಬಂದಿದೆ. ಈ ಬಗ್ಗೆ ಬ್ಯಾಂಕ್‌ಗಳು ಬ್ಯಾಂಕ್‌ವಾರು ತಿರಸ್ಕರಿಸಲಾದ ಅರ್ಜಿಗಳ ವಿವರವನ್ನು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸಲ್ಲಿಸುವಂತೆ ಸೂಚಿಸಿದರು. ಕಾರಣವಿಲ್ಲದೇ ಅರ್ಜಿಗಳನ್ನು ತಿರಸ್ಕರಿಸಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಸದರು ಸೂಚಿಸಿದರು.1,57,098.80 ಕೋಟಿ ರು. ವ್ಯವಹಾರ: ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ 1,57,098.80 ಕೋಟಿ ರು. ಆಗಿದ್ದು, ಕಳೆದ ವರ್ಷದಿಂದ ಶೇ.15.77 ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಬ್ಯಾಂಕ್ ಶಾಖೆಗಳ ಸಂಖ್ಯೆ 669 ಆಗಿದೆ. ಜಿಲ್ಲೆಯ ಒಟ್ಟು ಠೇವಣಿ 93,079.20 ಕೋಟಿ ರು. ಆಗಿದ್ದು, ಒಟ್ಟು ಸಾಲ 64,019.60 ಕೋಟಿ ರು.ಆಗಿದೆ.ಠೇವಣಿ ಅನುಪಾತ ಶೇ.68.78 ಆಗಿದೆ. ಜಿಲ್ಲೆಯಲ್ಲಿ ಈವರೆಗೆ ಆದ್ಯತೆವಲಯ ಮತ್ತು ಆದ್ಯತೆಯೇತರ ವಲಯಗಳಲ್ಲಿ 29720.02 ಕೋಟಿ ರು. ಸಾಲ ವಿತರಿಸಲಾಗಿದ್ದು, ತ್ರೈಮಾಸಿಕ ಗುರಿಯಲ್ಲಿ ಶೇ.114.88 ನಿರ್ವಹಣೆ ಸಾಧಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ 7,156.46 ಕೋಟಿ ರು. ಸಾಲ ವಿತರಿಸಲಾಗಿದೆ. ಶೇ.99.50 ಗುರಿ ಸಾಧಿಸಲಾಗಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಯಡಿ 7,682.22 ಕೋಟಿ ರು., ಆದ್ಯತಾ ವಲಯದ ಶಿಕ್ಷಣ ಸಾಲ ಕ್ಷೇತ್ರದಲ್ಲಿ 132.30 ಕೋಟಿ ರು., ಆದ್ಯತಾ ವಲಯದ ಗೃಹ ಸಾಲ ಕ್ಷೇತ್ರದಲ್ಲಿ 235.99 ಕೋಟಿ ರು., ಆದ್ಯತಾ ವಲಯದಲ್ಲಿ ಒಟ್ಟು 16,499.01 ಕೋಟಿ ರು. ಸಾಲ ವಿತರಿಸಲಾಗಿದ್ದು, ಶೇ.124.94 ಪ್ರಗತಿ ಸಾಧಿಸಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಪ್ರಗತಿ ಸಾಧನೆ ಮಾಡಲು ಸೂಚನೆ: ಪ್ರಧಾನಮಂತ್ರಿ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿಗೆ ಸಂಬಂಧಿಸಿದಂತೆ ಗುರಿ ಸಾಧನೆ ಮಾಡದ ಬ್ಯಾಂಕ್‌ಗಳಿಗೆ ಗುರಿ ಸಾಧನೆ ಮಾಡಲು ಸೂಚಿಸಲಾಯಿತು.ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಕೆನರಾ ಬ್ಯಾಂಕ್ ಅಧಿಕಾರಿ ವೆಂಕಟಪ್ರಸಾದ್, ನಬಾರ್ಡ್‌ನ ಸಂಗೀತಾ ಕರ್ತ, ಆರ್‌ಬಿಐನ ಮೋನಿರಾಜ ಮತ್ತಿತರರು ಇದ್ದರು.