ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುತಾಯಿಯ ಎದೆಹಾಲು ನವಜಾತ ಶಿಶುವಿಗೆ ಅತ್ಯಮೂಲ್ಯ ಮತ್ತು ಪರಿಪೂರ್ಣ ಪೋಷಣೆ. ಇದು ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ತಿಳಿಸಿದರು.ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ ಪ್ರತಿ 3 ತಿಂಗಳಿಗೊಮ್ಮೆ ನವಜಾತ ಶಿಶುವಿನ ಸಾವಿನ ಬಗ್ಗೆ ವರದಿ ಪಡೆಯಲಾಗುತ್ತದೆ. ಮಗುವಿಗೆ ಎದೆಹಾಲು ಕುಡಿಸಿ ತೇಗಿಸದೆ ಹಾಗೆ ಮಲಗಿಸಿದಾಗ ವಾಂತಿ ಮಾಡಿಕೊಂಡು ಲಂಗ್ಸ್ ಸೋಂಕಿನಿಂದ ಶೇ.50 ರಷ್ಟು ನವಜಾತ ಶಿಶುವಿನ ಸಾವಿಗೀಡಾಗಿರುವುದು ವರದಿಯಲ್ಲಿ ತಿಳಿದುಬಂದಿದೆ ಎಂದು ಹೇಳಿದರು.ಮಗು ಹುಟ್ಟಿದ ಮೊದಲ 6 ತಿಂಗಳು ತಾಯಿಯ ಎದೆ ಹಾಲು ಕುಡಿಸುವುದು ಅತ್ಯಗತ್ಯ. ಬಾಣಂತಿಯರ ಪಾಲನೆ ಮಾಡುವ ತಾಯಿ, ಅಜ್ಜಿ, ಗಂಡ, ಚಿಕ್ಕಮ್ಮ ಇವರು ವೈದ್ಯರ ಸಲಹೆ ಪಾಲಿಸಬೇಕು. ತಾಯಂದಿರು ಮಗುವಿಗೆ ಹಾಲು ಕುಡಿಸಿದ ನಂತರ ತೇಗಿಸಿ ನಂತರ ಮಗುವನ್ನು ಮಲಗಿಸುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ಮಾತನಾಡಿ, ತಾಯಿ ಮೊದಲ ಹಾಲಾದ ಕಾಲಸ್ಟ್ರಮ್ ರೋಗಗಳಿಂದ ರಕ್ಷಣೆ ನೀಡುವ ಜೊತೆಗೆ ಮಗುವಿನ ದೈಹಿಕ ಬೆಳವಣಿಗೆ ಬೇಕಾದ ಪ್ರೋಟೀನ್, ಕೊಬ್ಬು ಮತ್ತು ವಿಟಮಿನ್ ಸರಿಯಾದ ಪ್ರಮಾಣದಲ್ಲಿ ದೊರೆಯುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಮಗುವನ್ನುಆರೋಗ್ಯವಾಗಿಡುತ್ತದೆ ಎಂದು ಹೇಳಿದರು.ಶಿಶುವಿನ ಮೊದಲ 6 ತಿಂಗಳು ಕೇವಲ ಎದೆಹಾಲನ್ನು ಮಾತ್ರ ನೀಡಬೇಕು. ಒಂದು ದಿನಕ್ಕೆ ಒಂದು ಗಂಟೆ ಅಂತರದಲ್ಲಿ ೩-೪ ಬಾರಿ ಅದರಲ್ಲೂ ರಾತ್ರಿ ೨-೩ ಬಾರಿ ಕುಡಿಸಬೇಕು ಇದರಿಂದ ಎದೆ ಹಾಲು ಮಗುವಿನ ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣ ವಾಗುತ್ತದೆ ಮತ್ತು ಹೊಟ್ಟೆಯ ಬ್ಯಾಕ್ಟೀರಿಯಾವನ್ನು ಆರೋಗ್ಯವಾಗಿಡುವ ಜೊತೆಗೆ ತಾಯಿ ಮತ್ತು ಮಗುವಿನ ನಡುವೆ ಭಾವನಾತ್ಮಕ ನಂಟು ಗಟ್ಟಿಗೊಳಿಸುತ್ತದೆ ಎಂದು ಮಾಹಿತಿ ನೀಡಿದರು.ದಿನಪೂರ್ತಿ ಮಗು ಪಾಲನೆ ಮಾಡುವ ತಾಯಿ ಆಯಾಸಗೊಂಡಿರುತ್ತಾರೆ ಅವರಿಗೂ ವಿಶ್ರಾಂತಿ ಬೇಕಾಗುತ್ತದೆ. ಮಗುವಿಗೆ ಹಾಲು ಕುಡಿಸುತ್ತ ನಿದ್ರೆಗೆ ಜಾರಿದಾಗ ಮಗು ಉಸಿರುಗಟ್ಟಿ ಸಾವಿಗೀಡಾಗಿರುವ ಅನೇಕ ಘಟನೆಗಳು ನಡೆದಿವೆ ಇದರಿಂದ ತಾಯಂದಿರು ಎಚ್ಚರ ವಹಿಸಬೇಕು ಎಂದು ಹೇಳಿದರು.ಈ ವೇಳೆ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಹರೀಶ್ ಬಾಬು, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಜಿಲ್ಲಾ ಸರ್ಜನ್ ಡಾ. ದೇವ ರಾಜ್, ಮಾಳವಿ ರಘುನಂದನ್, ಡಾ. ಚಂದ್ರಶೇಖರ್ ಸಾಲಿಮಠ್, ಡಾ.ಗೀತಾಂಜಲಿ, ಜಲಜಾಕ್ಷಿ, ಬೇಬಿ, ಲಲಿತಾರೇಣುಕಾ, ಉಪಸ್ಥಿತರಿದ್ದರು.