ಬಿಆರ್‌ಟಿಎಸ್‌ ಅವ್ಯವಸ್ಥೆ ಖಂಡಿಸಿ ಪಾದಯಾತ್ರೆ ನಾಳೆ

| Published : Jul 14 2024, 01:31 AM IST

ಸಾರಾಂಶ

ಸಾರ್ವಜನಿಕರ ಅಪಾರ ಪ್ರಮಾಣದ ತೆರಿಗೆ ಹಣ ಬಳಸಿ ಅನುಷ್ಠಾನಗೊಳಿಸಿರುವ ಬಿಆರ್‌ಟಿಎಸ್‌ ಯೋಜನೆಯು ಜನರ ಹಿತಕ್ಕೆ ಪೂರಕ ಆಗಬೇಕು. ಆದ್ದರಿಂದ ಈ ಸದುದ್ದೇಶದ ಪಾದಯಾತ್ರೆ ಹಮ್ಮಿಕೊಂಡಿದ್ದು ಇದಕ್ಕೆ 14 ಸಂಘಟನೆಗಳು ಬೆಂಬಲ ಸೂಚಿಸಿವೆ.

ಧಾರವಾಡ:

ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಧ್ಯೆದ ಎಚ್‌ಡಿಬಿಆರ್‌ಟಿಎಸ್ ಅವ್ಯವಸ್ಥೆಯ ವಿರುದ್ಧ ಧಾರವಾಡ ಧ್ವನಿ ವತಿಯಿಂದ ಜು. 15ರಂದು ನವಲೂರು ಸೇತುವೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಧಾರವಾಡ ಜ್ಯುಬಿಲಿ ಸರ್ಕಲ್‌ದಿಂದ ನವಲೂರು ವರೆಗೆ ಹಾಗೂ ಹುಬ್ಬಳ್ಳಿಯ ಉಣಕಲ್ ಕೆರೆಯಿಂದ ರಾಣಿ ಚೆನ್ನಮ್ಮ ಸರ್ಕಲ್‌ ವರೆಗೆ ಮಿನಿ ವಾಹನಗಳಿಗೆ (ಕಾರು, ಬೈಕ್, ಆಟೋರಿಕ್ಷಾ ಇತರೆ) ಬಿಆರ್‌ಟಿಎಸ್‌ ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಎನ್‌ಟಿಟಿಎಫ್‌, ಟೋಲನಾಕಾ, ಕೆಎಂಎಫ್, ನವಲೂರು ಬ್ರಿಡ್ಜ್ ಹಾಗೂ ಸನಾ ಕಾಲೇಜು ಎದುರು ಬಿಆರ್‌ಟಿಎಸ್‌ ಮಾರ್ಗದಲ್ಲಿ ನೀರು ನಿಲುಗಡೆ ಆಗುವುದನ್ನು ತಪ್ಪಿಸಬೇಕು. ಧಾರವಾಡ ನಗರದ ಲಕ್ಷ್ಮೀ ಟಾಕೀಜ್ ಬಳಿ ಹಾಕಿರುವ ಬ್ಯಾರಿಕೇಡ್ ತೆಗೆದು, ತಹಸೀಲ್ದಾರ್ ಕಚೇರಿ ಕಡೆಯಿಂದ ಸಂಗಮ ಥಿಯೇಟರ್ ಸರ್ಕಲ್ ಮೂಲಕ ಟಿಕಾರೆ ರೋಡ್‌ನತ್ತ ವಾಹನಗಳು ತೆರಳಲು ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು.

ಧಾರವಾಡದ ಜೆಎಸ್‌ಎಸ್‌ ಕಾಲೇಜಿನ ಮುಂದಿರುವ ಅವೈಜ್ಞಾನಿಕ ಸಿಗ್ನಲ್ ಲೈಟ್ ಸರಿಪಡಿಸಿ, ವಾಹನಗಳು ಮತ್ತು ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಸುಗಮ ಸಂಚಾರ ವ್ಯವಸ್ಥೆ ಆಗಬೇಕು. ಯಾಲಕ್ಕಿ ಶೆಟ್ಟರ್ ಕಾಲನಿಯ ಎದುರಿನ ಬ್ಯಾರಿಕೇಡ್ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಮುಕ್ತ ಮಾಡಬೇಕು. ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದ ಎದುರಿನ ಬ್ಯಾರಿಕೇಡ್ ತೆಗೆದು ಸಾರ್ವಜನಿಕರ ವಾಹನಗಳಿಗೆ ಅವಕಾಶ ಒದಗಿಸಬೇಕು. ಸದ್ಯ ಸಾರ್ವಜನಿಕರ ವಾಹನಗಳು ಸಂಚರಿಸುವ ಎರಡೂ ಬದಿಯ ರಸ್ತೆಯಲ್ಲಿನ ಮನೆ, ವಾಣಿಜ್ಯ ಮಳಿಗೆ ಇನ್ನಿತರ ಸ್ಥಳಗಳ ಬಳಿ ವಾಹನಗಳ ನಿಲುಗಡೆಯಿಂದ ಉಂಟಾಗಿರುವ ಸಮಸ್ಯೆ ನಿವಾರಿಸಬೇಕು. ಸುಮಾರು ಶೇ. 95ರಷ್ಟು ಸಮಯ ಬಿಆರ್‌ಟಿಎಸ್‌ ರಸ್ತೆಗಳು ಖಾಲಿಯಾಗಿದ್ದರೆ, ಸಾರ್ವಜನಿಕ ರಸ್ತೆಯಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಇದರಿಂದ ವಾಹನ ದಟ್ಟನೆ ಹೆಚ್ಚಾಗಿ ಸಾವು-ನೋವು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ವಿಷಯವಾಗಿ ಸರ್ಕಾರದ ಮೇಲೆ ಒತ್ತಡ ತರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರ ಶಿವಳ್ಳಿ ತಿಳಿಸಿದರು.

ಸಾರ್ವಜನಿಕರ ಅಪಾರ ಪ್ರಮಾಣದ ತೆರಿಗೆ ಹಣ ಬಳಸಿ ಅನುಷ್ಠಾನಗೊಳಿಸಿರುವ ಈ ಯೋಜನೆಯು ಜನರ ಹಿತಕ್ಕೆ ಪೂರಕ ಆಗಲೇಬೇಕು. ಆದ್ದರಿಂದ ಈ ಸದುದ್ದೇಶದ ಹೋರಾಟಕ್ಕೆ ಈಗಾಗಲೇ 14 ಸಂಘಟನೆಗಳು ಬೆಂಬಲ ಸೂಚಿಸಿದ್ದು, ಅವಳಿ ನಗರ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಂಜು ನಡಟ್ಟಿ, ಶರಣಗೌಡ ಗಿರಡ್ಡಿ, ಸಂತೋಷ ಪಟ್ಟಣಶೆಟ್ಟಿ, ಪರಮೇಶ ಕಾಳೆ , ವೆಂಕಟೇಶ ರಾಯ್ಕರ್, ಮಂಜುನಾಥ ನೀರಲಕಟ್ಟಿ , ಇಮ್ರಾನ ತಾಳಿಕೋಟಿ, ಬಸವರಾಜ ಪೋಮೊಜಿ, ಕಲಂದರ ಮುಲ್ಲಾ, ಸುರೇಖಾ ಮೇದ ಇದ್ದರು.