ಇತ್ತೀಚಿಗೆ ದಿ.ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಸುದೀರ್ಘ ಅಧಿಕಾರ ಅವಧಿಯ ಸಿಎಂ ದಾಖಲೆ ಮುರಿದಿರುವುದು ಸಂತೋಷ ತರುವ ವಿಷಯವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನ ಬೆನ್ನನ್ನು ತಾವೇ ತಟ್ಟಿಕೊಳ್ಳುವುದನ್ನು ನಿಲ್ಲಿಸಲಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ, ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಹುಟ್ಟುಹಬ್ಬದ ಅಂಗವಾಗಿ ಜ.15ರಂದು ರಾಷ್ಟ್ರೀಯ ಸ್ಪೂರ್ತಿ ಹಾಗೂ ಪ್ರೇರಣಾ ದಿನವನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುವುದು ಎಂದು ಬಿ.ಎಸ್.ಪಿ.ರಾಜ್ಯಾಧ್ಯಕ್ಷ ಡಾ.ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಯಾವತಿ ಅವರ ಹುಟ್ಟುಹಬ್ಬದ ಅಂಗವಾಗಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಪದಾಧಿಕಾರಿಗಳ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಾಯಾವತಿ ಅವರ ಜನ್ಮ ದಿನವನ್ನು ಜ.15ರಂದು ಸ್ಫೂರ್ತಿ ಮತ್ತು ಪ್ರೇರಣೆಯ ದಿನವಾಗಿ ಮೈಸೂರಿನ ಜಗನ್ಮೋಹನ ಅರಮನೆ ಆವರಣದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಸುಮಾರು ಎರಡು ಸಾವಿರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸೇರಿ ವಿಜೃಂಭಣೆಯಿಂದ ಅವರ ಜನ್ಮದಿನವನ್ನು ಆಚರಿಸಲಾಗುವುದು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.

ಇತ್ತೀಚಿಗೆ ದಿ.ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಸುದೀರ್ಘ ಅಧಿಕಾರ ಅವಧಿಯ ಸಿಎಂ ದಾಖಲೆ ಮುರಿದಿರುವುದು ಸಂತೋಷ ತರುವ ವಿಷಯವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನ ಬೆನ್ನನ್ನು ತಾವೇ ತಟ್ಟಿಕೊಳ್ಳುವುದನ್ನು ನಿಲ್ಲಿಸಲಿ ಎಂದು ಸಲಹೆ ನೀಡಿದರು.

ದೇವರಾಜ ಅರಸು ಅವರು ಉಳುವವನೆ ಭೂಮಿ ಒಡೆಯ ಕಾನೂನನ್ನು ಜಾರಿಗೆ ತಂದು ನಾಡಿನ ಜನರ ಪ್ರಶಂಸೆಗೆ ಒಳಗಾಗಿದ್ದರು. ಆದರೆ, ಸಿದ್ದರಾಮಯ್ಯ ಅವರು ದಲಿತರ ಪ್ರಗತಿಗೆ ಮೀಸಲಿಟ್ಟಿದ್ದ ಸುಮಾರು 20 ಸಾವಿರ ಕೋಟಿಗೂ ಹೆಚ್ಚು ಎಸ್.ಸಿ.ಪಿ, ಟಿ.ಎಸ್.ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿ ದಲಿತ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಗೇರಲು ದಲಿತರು ಹಾಗೂ ಮುಸಲ್ಮಾನ ಮತಗಳು ಕಾರಣ. ಅವರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕೇ ಹೊರತು ಅವರಿಗೆ ಮೀಸಲು ಹಣವನ್ನೇ ಗ್ಯಾರಂಟಿ ಯೋಜನೆಗಳ ಜಾರಿ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಂಡಿರುವುದು ಸಂವಿಧಾನ ವಿರೋಧಿ ಕೆಲಸವಾಗಿದೆ ಎಂದು ಕಿಡಿಕಾರಿದರು.

ದಲಿತರ ಬಗ್ಗೆ ಗೌರವವಿದ್ದರೆ ಕಳೆದ ಎರಡೂವರೆ ವರ್ಷಗಳಿಂದ ಒಂದೇ ಒಂದು ಅಂಬೇಡ್ಕರ್ ವಸತಿ ಯೋಜನೆಯಡಿ ಬಡವರಿಗೆ ಮನೆ ನೀಡಿಲ್ಲ. ಈಗಲಾದರೂ ಅಂಬೇಡ್ಕರ್ ಆವಾಸ್ ಯೋಜನೆ ಅಡಿ ಗ್ರಾಮೀಣ ಬಡ ದಲಿತರಿಗೆ ಮನೆಗಳನ್ನು ನೀಡಿ ಗೌರವ ಉಳಿಸಿಕೊಳ್ಳಲಿ ಎಂದು ಆಗ್ರಹಿಸಿದರು.

ಸಭೆಯಲ್ಲಿ ಬಿಎಸ್ಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಚಿಕ್ಕಗಾಡಿಗನಹಳ್ಳಿ ಚಲುವರಾಜು, ಜಿಲ್ಲಾ ಉಸ್ತುವಾರಿ ಗೋವಿಂದರಾಜು, ಜಿಲ್ಲಾ ಕಾರ್ಯದರ್ಶಿ ಜಿ.ಡಿ.ಗಂಗಾಧರ್, ತಾಲೂಕು ಉಸ್ತುವಾರಿ ಬಸ್ತಿ ಪ್ರದೀಪ್, ತಾಲೂಕು ಬಿ.ಎಸ್.ಪಿ ಅಧ್ಯಕ್ಷ ಬಿಲ್ಲೇನಹಳ್ಳಿ ನವೀನ್, ತಾಲೂಕು ಕಾರ್ಯದರ್ಶಿ ಚಿಕ್ಕಗಾಡಿಗನಹಳ್ಳಿ ಸಿ.ಜೆ ಪ್ರದೀಪ್, ತಾಲೂಕು ಬಿ.ವಿ.ಎಫ್ ಸಂಚಾಲಕ ನಂಜುಂಡಿ, ಮುಖಂಡರಾದ ಜಯಶೀಲಾ, ರಾಮಾಚಾರಿ,ದೇವಾನಂದ್, ಕಾರ್ತಿಕ್ ಸಾಕ್ಯ, ಕುಮಾರ್, ಗುರುಲಿಂಗಯ್ಯ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.