ಮದ್ದೂರು ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ಸೇರ್ಪಡೆ ವಿಚಾರದಲ್ಲಿ ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಾಧಕ, ಬಾಧಕಗಳನ್ನು ಕುರಿತು ಚರ್ಚೆ ನಡೆಸದೆ ಏಕಾಏಕಿ ಕೈಗೊಂಡಿರುವ ನಿರ್ಧಾರ ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಸೇರಿದಂತೆ ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಜನಪ್ರತಿನಿಧಿಗಳು, ರೈತರು ಹಾಗೂ ಗ್ರಾಮಸ್ಥರೊಂದಿಗೆ ನಡೆಸುತ್ತಿರುವ ಹೋರಾಟಕ್ಕೆ ಸೋಮವಾರ ಕೈಗಾರಿಕೋದ್ಯಮಿಗಳು ಮತ್ತು ಮಡಿವಾಳ ಜನಾಂಗ ಬೆಂಬಲ ಸೂಚಿಸಿದ್ದಾರೆ.

ಗೆಜ್ಜಲಗೆರೆ ಗ್ರಾಪಂ ಎದುರು ಕಳೆದ 23 ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಕೈಗಾರಿಕೋದ್ಯಮಿ ಆದಿ ಪ್ರಸನ್ನ ಕುಮಾರ್ ಹಾಗೂ ಮಡಿವಾಳ ಜನಾಂಗದ ಮುಖಂಡರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ಇದೇ ವೇಳೆ ಮಡಿವಾಳ ಜನಾಂಗ ಹೋರಾಟಗಾರರಿಗೆ ಮಧ್ಯಾಹ್ನದ ಊಟವಾಗಿ ಮಂಡ್ಯ ಸೊಗಡಿನ ಹಸಿ ಅವರೆಕಾಳು ಮತ್ತು ಸೊಪ್ಪಿನ ಪಲ್ಯ, ಉಪ್ಪು ಸಾರು ಹಾಗೂರಾಗಿ ಮುದ್ದೆ ಊಟ ವ್ಯವಸ್ಥೆ ಮಾಡಿ ಹೋರಾಟಕ್ಕೆ ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಧರಣಿ ಸ್ಥಳದಲ್ಲಿ ಆದಿ ಪ್ರಸನ್ನ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ಸೇರ್ಪಡೆ ವಿಚಾರದಲ್ಲಿ ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಾಧಕ, ಬಾಧಕಗಳನ್ನು ಕುರಿತು ಚರ್ಚೆ ನಡೆಸದೆ ಏಕಾಏಕಿ ಕೈಗೊಂಡಿರುವ ನಿರ್ಧಾರ ಸರಿಯಲ್ಲ. ಇದು ಮುಂದಿನ ದಿನಗಳಲ್ಲಿ ತಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

ಧರಣಿಯಲ್ಲಿ ಮಡಿವಾಳ ಜನಾಂಗದ ವೀರಪ್ಪ, ಚನ್ನವೀರಪ್ಪ, ರವಿ, ರೈತಪರ ಹೋರಾಟಗಾರ್ತಿ ಸುನಂದ ಜಯರಾಮ್, ತಾಪಂ ಮಾಜಿಅಧ್ಯಕ್ಷ ಜಿ.ಪಿ.ಯೋಗೇಶ್, ಜಿ.ಎಸ್.ವೀರಪ್ಪ, ಜಿ.ಎ.ಶಂಕರ್, ಗ್ರಾಪಂ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷ ದೀಪಕ, ಸದಸ್ಯರಾದ ಜಯಮ್ಮ, ಲಕ್ಷ್ಮಮ್ಮ, ಜಿ.ಟಿ .ಚಂದ್ರಶೇಖರ್ , ಜಿ.ಡಿ .ಚಂದ್ರಶೇಖರ್ ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.