ವಸತಿ ಶಾಲೆಗೆ ಮುಖ್ಯರಸ್ತೆ ನಿರ್ಮಿಸಿ ಕೊಡಿ

| Published : Jun 25 2025, 11:47 PM IST

ಸಾರಾಂಶ

ಶಾಲೆ ವಾತಾವರಣ ಚನ್ನಾಗಿದ್ದೂ ಮಕ್ಕಳಿಗೆ ಮತ್ತು ಪಾಲಕರಿಗೆ ಶಾಲೆಗೆ ಬರಲು ಮುಖ್ಯ ರಸ್ತೆ ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಕಳೆದ ನಾಲ್ಕು ತಿಂಗಳ ಹಿಂದೆ ತೋಗುಣಸಿ ರಸ್ತೆಗೆ ಹೊಂದಿಕೊಂಡು ಹಾನಾಪೂರ ಎಸ್.ಪಿ. ಗ್ರಾಪಂ ವ್ಯಾಪ್ತಿಯ ವಿಶಾಲವಾದ ಪ್ರದೇಶದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ನಿರ್ಮಾಣವಾಗಿದ್ದರೂ ಅದಕ್ಕೆ ಸರಿಯಾದ ಮುಖ್ಯ ರಸ್ತೆ ಇಲ್ಲ. ಪಾಲಕರಿಗೆ, ಮಕ್ಕಳಿಗೆ ಬರಲು ಸಾಕಷ್ಟು ಅನಾನುಕೂಲವಾಗಿದೆ. ಮುಖ್ಯ ರಸ್ತೆ ನಿರ್ಮಿಸಿಕೊಡುವಂತೆ ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರಗೆ ವಸತಿ ಶಾಲೆ ಪ್ರಾಚಾರ್ಯ ರುಕ್ಮೀಣಿಬಾಯಿ ಪವಾರ ಮನವಿ ಮಾಡಿದರು.

ತಾಲೂಕಿನ ಹಾನಾಪೂರ ಎಸ್.ಪಿ. ಗ್ರಾಪಂ ವ್ಯಾಪ್ತಿಯ ಇಂದಿರಾಗಾಂಧಿ ವಸತಿ ಶಾಲೆಗೆ ಇಒ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರುಕ್ಮೀಣಿಬಾಯಿ ಮಾತನಾಡಿದರು. ಶಾಲೆ ವಾತಾವರಣ ಚನ್ನಾಗಿದ್ದೂ ಮಕ್ಕಳಿಗೆ ಮತ್ತು ಪಾಲಕರಿಗೆ ಶಾಲೆಗೆ ಬರಲು ಮುಖ್ಯ ರಸ್ತೆ ಇಲ್ಲದಂತಾಗಿದೆ. ತೋಗುಣಸಿ ಬಸ್ ನಿಲ್ದಾಣದಿಂದ ಬರಬೇಕಾದರೆ ಸರಿಯಾದ ರಸ್ತೆಯಿಲ್ಲ. ಅಲ್ಲದೇ ಬಹಳ ದೂರವಾಗುತ್ತದೆ. ಡಿಪ್ಲೊಮಾ ಕಾಲೇಜು ಪ್ರಮುಖ ರಸ್ತೆಯಿಂದ ಕೇವಲ 200 ಮೀ. ಅಂತರದಲ್ಲಿ ನಮ್ಮ ಶಾಲೆಯಿದೆ. ಈ ಮಾರ್ಗವನ್ನೇ ರಸ್ತೆಯನ್ನಾಗಿ ನಿರ್ಮಿಸಿಕೊಡಲು ವಿನಂತಿಸಿಕೊಂಡರು.

ಈ ವಿಷಯವನ್ನು ಸಿಇಒ ಗಮನಕ್ಕೂ ತರುತ್ತೇನೆ. ಆದರೆ ತಾಪಂ ಅನುದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ಇರುವುದಿಲ್ಲ. ಶಾಸಕರ ಹಾಗೂ ಇತರೇ ಅನುದಾನ ಬಳಸಿ ತಾವು ರಸ್ತೆ ನಿರ್ಮಿಸಿಕೊಳ್ಳಬೇಕಾಗುತ್ತದೆ. ಆದರೂ ಸಿಇಓ ಅವರ ಗಮನಕ್ಕೆ ತಂದು ಅನುಕೂಲ ಮಾಡಿಕೊಡುತ್ತೇವೆ ಎಂದು ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಪ್ರಾಚಾರ್ಯರಿಗೆ ಭರವಸೆ ನೀಡಿದರು.

ಗ್ರಾಪಂ ಜಗದೀಶ ಹಿರೇಗೌಡರ ಮಾತನಾಡಿ, ಶಾಲೆಯ ಉದ್ಘಾಟನೆಗೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಬರುವ ಹಿಂದಿನ ದಿನ ಸದ್ಯ ಇರುವ ರಸ್ತೆಯನ್ನೂ ಬಳಸಲು ಅಲ್ಲಿನ ರೈತರು ಅವಕಾಶ ಕೊಟ್ಟಿರಲಿಲ್ಲ. ಅವರಿಗೆ ಮನವಿ ಮಾಡಿಕೊಂಡಾಗ ಅವಕಾಶ ನೀಡಿದ್ದಾರೆ. ಡಿಪ್ಲೊಮಾ ಕಾಲೇಜು ಪಕ್ಕದ ಮಾರ್ಗ ಹತ್ತಿರವಗುತ್ತದೆ. ಆದರೆ ಇದೂ ಕೂಡ ಖಾಸಗಿ ಜಮೀನು ಮಾಲೀಕರಿಗೆ ಸಂಬಂಧಿಸಿವೆ. ಸರ್ಕಾರ ಮಟ್ಟದಲ್ಲಿ ಕೆಲಸವಾಗಬೇಕು ಎಂದರು.

ವಸತಿ ಶಾಲೆಗೆ ಮುಖ್ಯ ರಸ್ತೆ ಮತ್ತು ಆವರಣದಲ್ಲಿರುವ ವಿಶಾಲವಾದ ಹೆಚ್ಚಿನ ಸ್ಥಳದಲ್ಲಿ ಅರಣ್ಯ ಇಲಾಖೆಯಿಂದ ಹೆಚ್ಚಿನ ಸಸಿ ನೆಡುವಂತೆ ಪ್ರಾಚಾರ್ಯರು ವಿನಂತಿಸಿಕೊಂಡರು.

ಬಾರದ ಸಿಇಒ:

ಬಾಗಲಕೋಟೆ ಸಿಇಓ ಶಶಿಧರ ಕುರೇರ ಇಂದಿರಾಗಾಂಧಿ ವಸತಿ ಶಾಲೆಗೆ, ಮಧ್ಯಾಹ್ನ 3 ಗಂಟೆಗೆ ಬರಬೇಕಾಗಿತ್ತು. ನಂತರ ಸರ್ಕಾರಿ ಆಸ್ಪತ್ರೆಗೆ ಹಾಗೂ ತಾಪಂ ಕಚೇರಿಗೆ ಭೇಟಿ ಇತ್ತು. ಅವರು 4.30 ಗಂಂಟೆಯಾದರೂ ಬಾರದ ಕಾರಣ ಅವರಿಗಾಗಿ ಎಲ್ಲರೂ ಕಾಯಬೇಕಾಯಿತು. ತಾಪಂ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗಾಧಿಕಾರಿ ರಾಮಚಂದ್ರ ಮೇತ್ರಿ, ಹಾನಾಪೂರ ಎಸ್.ಪಿ. ಗ್ರಾಪಂ ಅಧ್ಯಕ್ಷ ಜಗದೀಶ ಹಿರೇಗೌಡರ, ಪಿಡಿಓ ಸುನೀತಾ ಅಂಕೋಲೆ, ತಾಪಂ ಯೋಜನಾಧಿಕಾರಿ ಶೇಖರ ಅಂಗಡಿ ಸೇರಿದಂತೆ ಇನ್ನೂ ಅನೇಕರು ಇದ್ದರು.