ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನನ್ನು ದತ್ತು ನೀಡಿದ್ದನ್ನೇ ಮುಂದಿಟ್ಟುಕೊಂಡು ಜೀವನದ ಸಂಧ್ಯಾಕಾಲದಲ್ಲಿರುವ ಹೆತ್ತ ತಾಯಿಗೆ ಜೀವನಾಂಶ ನೀಡಲು ನಿರಾಕರಿಸಿದ್ದ ಮಗನಿಗೆ ಹೈಕೋರ್ಟ್‌ ಛೀಮಾರಿ ಹಾಕಿದೆ.

ಅಲ್ಲದೆ, ದತ್ತು ನೀಡಿದ ಮಾತ್ರಕ್ಕೆ ಹೆತ್ತವಳಿಗೆ ಮಗನಾಗುವುದಿಲ್ಲವೇ? ಎಂದು ಮಾರ್ಮಿಕವಾಗಿ ಪ್ರಶ್ನಿಸುವುದರ ಜೊತೆಗೆ ತಾಯಿಗೆ ಮಾಸಿಕ ಎಂಟು ಸಾವಿರ ರು. ಜೀವನಾಂಶ ಪಾವತಿಸುವಂತೆ ತಾಕೀತು ಮಾಡಿ ಮಾನವೀಯತೆ ಮೆರೆದಿದೆ.

ಹೆತ್ತ ತಾಯಿಗೆ ಮಾಸಿಕ ಎಂಟು ಸಾವಿರ ರು. ಜೀವನಾಂಶ ನೀಡಲು ನಿರ್ದೇಶಿಸಿದ್ದ ವಿಚಾರಣಾ ನ್ಯಾಯಾಲಯಗಳ ಕ್ರಮ ಪ್ರಶ್ನಿಸಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮೇಗಳಾಪುರ ಗ್ರಾಮ ನಿವಾಸಿ ಎಂ.ಸಿ. ಚೇತನ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.


ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಆತನ ಹೆತ್ತತಾಯಿ ಶಿವಲಿಂಗಮ್ಮ ತನ್ನ ಸಹೋದರಿ ಪುಟ್ಟಮ್ಮಗೆ ದತ್ತು ನೀಡಿದ್ದಾರೆ. ಹೀಗಿದ್ದರೂ ಶಿವಲಿಂಗಮ್ಮಗೆ ಎಂಟು ಸಾವಿರ ರು. ಜೀವನಾಂಶ ನೀಡಲು ಅಧೀನ ನ್ಯಾಯಾಲಯಗಳು ಆದೇಶಿಸಿವೆ ಎಂದು ಆಕ್ಷೇಪಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ತಾಯಿಗೆ 4 ಸಾವಿರ ರು. ಜೀವನಾಂಶ ನೀಡುವುದಕ್ಕೆ ವಿರೋಧಿಸಿ ಕ್ರಿಮಿನಲ್‌ ಅರ್ಜಿ ಸಲ್ಲಿಸುತ್ತೀರಾ? ಅರ್ಜಿ ಹಿಂಪಡೆಯುತ್ತೀರಾ? ಇಲ್ಲವೇ ಜೀವನಾಂಶ ಮೊತ್ತವನ್ನು 8 ಸಾವಿರಕ್ಕೆ ಹೆಚ್ಚಿಸಬೇಕೆ? ಎಂದು ಖಾರವಾಗಿ ಪ್ರಶ್ನಿಸಿದರು.

ಅರ್ಜಿದಾರರು ಪರ ವಕೀಲರು, ಸ್ವಾಮಿ.. ಜೀವನಾಂಶ 4 ಸಾವಿರ ಅಲ್ಲ; 8 ಸಾವಿರ ರು. ಎಂದು ತಿಳಿಸಿದರು. ನ್ಯಾಯಮೂರ್ತಿಗಳು, ಹಾಗಾದರೆ ಎಂಟನ್ನು 16 ಸಾವಿರಕ್ಕೆ ಹೆಚ್ಚಿಸಲೆ ಎಂದು ಮರು ಪ್ರಶ್ನೆ ಹಾಕಿದರು. ಆಗ ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ದತ್ತು ನೀಡಲಾಗಿದೆ. ಹೆತ್ತತಾಯಿಗೆ ಸಾಕಷ್ಟು ಆಸ್ತಿಯಿದೆ ಎಂದು ಆಕ್ಷೇಪಿಸಿದರು.

ಈ ಮಾತು ಕೇಳಿ ಕೆರಳಿದ ನ್ಯಾಯಮೂರ್ತಿಗಳು, ಇಂತಹ ವಾದ ಮಾಡಬೇಡಿ. ದತ್ತು ನೀಡಿದ್ದರೆ ಏನಂತೆ? ಹೆತ್ತವಳಿಗೆ ಅರ್ಜಿದಾರ ಮಗನಲ್ಲವೇ? ಯಾವುದೇ ಕಾರಣಕ್ಕೂ ಜೀವನಾಂಶ ಕಡಿಮೆ ಮಾಡಲಾಗದು. ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 125 ಅಡಿಯಲ್ಲಿ ಅಧೀನ ನ್ಯಾಯಾಲಯದ ಮೊರೆ ಹೋಗಿ ಮಕ್ಕಳಿಂದ ಜೀವನಾಂಶ ಕೋರಲು ತಾಯಿಗೆ ಅವಕಾಶವಿದೆ. ಪ್ರಕರಣದಲ್ಲಿ ಅಧೀನ ನ್ಯಾಯಾಲಯಗಳು ಸರಿಯಾದ ಆದೇಶವನ್ನೇ ಮಾಡಿವೆ ಎಂದು ನುಡಿದರು.

ಆಗಲೂ ಅರ್ಜಿ ಹಿಂಪಡೆಯಲು ವಕೀಲರು ಮೀನಮೇಷ ಎಣಿಸುತ್ತಿದ್ದಾಗ ನ್ಯಾಯಮೂರ್ತಿಗಳು ಆದೇಶ ಬರೆಯಿಸಿ, ಎಂಟು ಸಾವಿರ ರು. ಸಣ್ಣ ಮೊತ್ತವಾಗಿದೆ. ಅಷ್ಟನ್ನು ತಾಯಿಗೆ ಪ್ರತಿ ತಿಂಗಳು ಪಾವತಿಸಬೇಕು ಎಂದು ಚೇತನ್‌ಗೆ ಸೂಚಿಸಿ ಅರ್ಜಿ ವಜಾಗೊಳಿಸಿದರು.--

ಬಾಕ್ಸ್...

ಅಕ್ಕನಿಗೆ 2ನೇ ಮಗನ ದತ್ತು

ಮೇಗಳಾಪುರದ ಚನ್ನವಿರೇಗೌಡಗೆ ಪುಟ್ಟಮ್ಮ ಮೊದಲನೆ ಪತ್ನಿಯಾದರೆ; ಶಿವಲಿಂಗಮ್ಮ ಎರಡನೇ ಪತ್ನಿ. ಪುಟ್ಟಮ್ಮಗೆ ಮಕ್ಕಳು ಆಗಿರಲಿಲ್ಲ. ಶಿವಲಿಂಗಮ್ಮಗೆ ನವೀನ್‌ ಕುಮಾರ್‌ ಮತ್ತು ಚೇತನ್‌ ಇಬ್ಬರು ಮಕ್ಕಳು ಜನಿಸಿದ್ದರು. ಇದರಿಂದ ಪತಿಯ ಮರಣದ ನಂತರ ಶಿವಲಿಂಗಮ್ಮ ತನ್ನ ಎರಡನೇ ಪುತ್ರ ಚೇತನ್‌ ಅನ್ನು ಪುಟ್ಟಮ್ಮಗೆ ದತ್ತು ನೀಡಿದ್ದರು. 2001ರ ಸೆ.29ರಂದು ದತ್ತು ಪತ್ರವನ್ನು ನೋಂದಣಿ ಮಾಡಿಸಿದ್ದರು.

ಶಿವಲಿಂಗಮ್ಮ 2021ರಲ್ಲಿ ಮಳವಳ್ಳಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ಮಕ್ಕಳಿಂದ ಮಾಸಿಕ 60 ಸಾವಿರ ರು. ಜೀವನಾಂಶ ಕೊಡಿಸಲು ಕೋರಿದ್ದರು. ಮಳವಳ್ಳಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ಕೋರ್ಟ್‌, ಶಿವಲಿಂಗಮ್ಮಗೆ ಮಾಸಿಕ ತಲಾ 8 ಸಾವಿರ ರು. ಜೀವನಾಂಶ ಪಾವತಿಸಲು ನವೀನ್‌ ಮತ್ತು ಚೇತನ್‌ಗೆ 2021ರ ಫೆ.5ರಂದು ಆದೇಶಿಸಿತ್ತು.

ಈ ಆದೇಶ ರದ್ದು ಕೋರಿ ಚೇತನ್‌ ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನೆ ಅರ್ಜಿಯನ್ನು ಮಂಡ್ಯದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ವಜಾಗೊಳಿಸಿ, ಶಿವಲಿಂಗಮ್ಮಗೆ 64 ವರ್ಷವಾಗಿದೆ. ಸ್ವತಃ ಜೀವನ ನಿರ್ವಹಣೆ ಮಾಡಿಕೊಳ್ಳಲು ಸಾಧ್ಯವಾಗದು. ಹಿಂದು ದತ್ತು ಮತ್ತು ನಿರ್ವಹಣೆ ಕಾಯ್ದೆ ಸೆಕ್ಷನ್‌ 21 ಮತ್ತು 22 ಅಡಿಯಲ್ಲಿ ವಿಧವೆಯು ಸಹ ದತ್ತುದಾರರಿಂದ ಜೀವನಾಂಶ ಪಡೆಯುವ ಹಕ್ಕು ಹೊಂದಿರುತ್ತಾರೆ. ಚೇತನ್‌ ಮತ್ತು ನವೀನ್‌ ಜಂಟಿಯಾಗಿ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ಕುಟುಂಬದ ಆಸ್ತಿ ವಿಭಜನೆಯಾಗಿಲ್ಲ. ಇದರಿಂದ ಶಿವಲಿಂಗಮ್ಮ ಅವರು ಜೀವನ ನಿರ್ವಹಣೆ ಮಾಡಲು ಮಕ್ಕಳು ಜೀವನಾಂಶ ಪಾವತಿಸಬೇಕು ಎಂದು 2025ರ ಜು.28ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಚೇತನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.