ತಮಿಳುನಾಡಿನಿಂದ ಬಟ್ಟೆ ವ್ಯಾಪಾರದ ಸೋಗಿನಲ್ಲಿ ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬ 1 ಕೋಟಿ ಮೌಲ್ಯದ 42 ರಾಯಲ್ ಎನ್‌ಫೀಲ್ಡ್ ಬೈಕ್ ಕದ್ದು ಸಿಕ್ಕಿಬಿದ್ದಿದ್ದಾನೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಟ್ಟೆ ವ್ಯಾಪಾರದ ಸೋಗಿನಲ್ಲಿ ಬಂದು ಬುಲೆಟ್ ಕಳವು ಮಾಡುತ್ತಿದ್ದ ಕದೀಮನೊಬ್ಬ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ, 42 ರಾಯಲ್ ಎನ್‌ಫೀಲ್ಡ್ ಬುಲೆಟ್ ಜಪ್ತಿ ಮಾಡಿದ್ದಾರೆ,ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಕುಪ್ಪುಸ್ವಾಮಿ ಅಲಿಯಾಸ್ ರಾಜ ಬಂಧಿತನಾಗಿದ್ದು, ಆರೋಪಿಯಿಂದ 1 ಕೋಟಿ ರು. ಮೌಲ್ಯದ 42 ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಜಯನಗರ ಎರಡನೇ ಹಂತದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ಕರೆ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಲೆಟ್ ಪ್ರಿಯ ರಾಜ: ರಾಜ ವೃತ್ತಿಪರ ಕ್ರಿಮಿನಲ್ ಆಗಿದ್ದು, ಹಲವು ವರ್ಷಗಳಿಂದ ವಾಹನ ಕಳ್ಳತನ ಕೃತ್ಯದಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ತಮಿಳುನಾಡಿನಲ್ಲಿ ಐದು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಮನೆ ಮುಂದೆ ನಿಲ್ಲಿಸುವ ಬುಲೆಟ್ ಕಳ್ಳತನಕ್ಕೆ ಈತ ಕುಖ್ಯಾತಿ ಪಡೆದಿದ್ದ. ನಗರಕ್ಕೆ ಬಟ್ಟೆ ವ್ಯಾಪಾರದ ನೆಪದಲ್ಲಿ ಬರುತ್ತಿದ್ದ ಈತ ಮನೆ ಮುಂದೆ ನಿಲ್ಲಿಸುವ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ. ಕಳವು ಮಾಡಿ ಬುಲೆಟ್‌ಗಳನ್ನು 20-30 ಸಾವಿರ ರು.ಗೆ ತಮಿಳುನಾಡಿನಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಈತನ ಬಂಧನದಿಂದ ಆಡುಗೋಡಿ, ಬ್ಯಾಟರಾಯನಪುರ, ವಿವೇಕನಗರ, ಹಲಸೂರು ಗೇಟ್, ಕಾಟನ್‌ಪೇಟೆ ಹಾಗೂ ಮಹದೇವಪುರ ಸೇರಿ ಇತರೆ ಠಾಣೆಗಳ ವ್ಯಾಪ್ತಿಯಲ್ಲಿ ವರದಿಯಾಗಿದ್ದ 37 ಪ್ರಕರಣಗಳು ಪತ್ತೆಯಾಗಿವೆ. ಇನ್ನುಳಿದ ಐದು ಬೈಕ್‌ಗಳ ಮಾಲಿಕರ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
---ಬಾಕ್ಸ್......ಮತ್ತಿಬ್ಬರು ಬೈಕ್ ಕಳ್ಳರ ಸೆರೆ
ಇಂದಿರಾನಗರ ಠಾಣೆ ಪೊಲೀಸರಿಗೆ ಮತ್ತಿಬ್ಬರು ಬೈಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ.ಡಿ.ಜೆ.ಹಳ್ಳಿಯ ತೌಫಿಕ್ ಪಾಷ ಹಾಗೂ ಶೇಖ್ ಗೌಸ್ ಬಾಷಾ ಬಂಧಿತರಾಗಿದ್ದು, ಆರೋಪಿಗಳಿಂದ 24 ಲಕ್ಷ ರು. ಮೌಲ್ಯದ 20 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.
ಹಳೇ ಬಿನ್ನಮಂಗಲದ ಎನ್.ನಿಖಿಲ್ ಎಂಬುವರ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಇಬ್ಬರು ಸಹ ವೃತ್ತಿಪರ ಕಳ್ಳರಾಗಿದ್ದು, ಆರೋಪಿಗಳ ಬಂಧನದಿಂದ 20 ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.