ವಾರದಲ್ಲಿ ಬೀದಿ ನಾಯಿಗಳು ಹೊರ ವಲಯಕ್ಕೆ ಸ್ಥಳಾಂತರ

| Published : Nov 12 2025, 04:45 AM IST

ವಾರದಲ್ಲಿ ಬೀದಿ ನಾಯಿಗಳು ಹೊರ ವಲಯಕ್ಕೆ ಸ್ಥಳಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ಬೀದಿ ನಾಯಿಗಳ ಕಾಟದಿಂದ ತತ್ತರಿಸಿರುವ ಬೆಂಳೂರಿಗರಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸಿಹಿ ಸುದ್ದಿ ನೀಡಿದೆ. ಇನ್ನೊಂದು ವಾರದಲ್ಲಿ ನಾಯಿಗಳನ್ನು ನಗರದಿಂದ ಹೊರಗೆ ಸ್ಥಳಾಂತರ ಮಾಡಲು ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಂದು ವಾರದಲ್ಲಿ ಬೀದಿ ನಾಯಿಗಳನ್ನು ನಗರದ ಹೊರ ವಲಯದ ಜಾಗದಲ್ಲಿ ಸ್ಥಳಾಂತರಿಸಲು ಕ್ರಮ ವಹಿಸಲಾಗಿದೆ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಬೀದಿ ನಾಯಿಗಳನ್ನು ನಗರದ ಹೊರ ಭಾಗದಲ್ಲಿ ಶೆಲ್ಟರ್ ನಿರ್ಮಾಣ ಮಾಡಿ ಸ್ಥಳಾಂತರಿಸಲು ಸೂಚನೆ ನೀಡಿದ್ದಾರೆ. ಅದರಂತೆ ಈಗಾಗಲೇ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸುವ ಕಾರ್ಯ ಆರಂಭಿಸಲಾಗಿದ್ದು, ಒಂದು ವಾರದಲ್ಲಿ ಸ್ಥಳಾಂತರ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.

ಶೆಲ್ಟರ್‌ಗಳಲ್ಲಿ ನಾಯಿಗಳಿಗೆ ಆಹಾರ ವ್ಯವಸ್ಥೆ, ಲಸಿಕೆ, ಸಂತಾನಹರಣ ಶಸ್ತ್ರ ಚಿಕಿತ್ಸೆ ಮೊದಲಾದ ವ್ಯವಸ್ಥೆ ಮಾಡಲಾಗುವುದು. ನಗರದ ಶಾಲಾ ಕಾಲೇಜು, ಮೆಡಿಕಲ್‌ ಕಾಲೇಜು, ಸರ್ಕಾರಿ ಕಚೇರಿ, ಕೋರ್ಟ್‌ ಆವರಣ, ಮೈದಾನ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಮುಂತಾದೆಡೆ ಎಷ್ಟು ನಾಯಿ ಇವೆ ಎಂಬ ಮಾಹಿತಿ ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಲು ಸೂಚಿಸಲಾಗಿದೆ. ಬೀದಿ ನಾಯಿ ಹಿಡಿಯಲು ತಂಡಗಳನ್ನು ನಿಯೋಜನೆ ಮಾಡಿ ಸ್ಥಳಾಂತರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

-ಬಾಕ್ಸ್‌

ಬೀದಿ ನಾಯಿ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಿ

ಬೆಂಗಳೂರು ಕೇಂದ್ರ ಮತ್ತು ದಕ್ಷಿಣ ನಗರ ಪಾಲಿಕೆ ಆಯುಕ್ತರು ಸಭೆ ನಡೆಸಿ ಸುಪ್ರೀಂ ಕೋರ್ಟ್‌ ಆದೇಶದಂತೆ ನಗರದ ಹೊರ ವಲಯದಲ್ಲಿ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಲು ಸೂಕ್ತ ವ್ಯವಸ್ಥೆ ಮತ್ತು ಕ್ರಮ ಕೈಗೊಳ್ಳಿ ಎಂದು ಪಶುಪಾಲನೆ ವಿಭಾಗದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.