ಸಾರಾಂಶ
ಪಟ್ಟಣದ ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಕ್ ಮೇಳ ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಪಟ್ಟಣದ ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕೇಕ್ ಮೇಳವನ್ನು ಆಯೋಜಿಸಲಾಗಿತ್ತು. ವಿದ್ಯಾಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಕ್ ಮೇಳ ಆಯೋಜಿಸಿರುವುದು ವಿಶೇಷ.ಈ ಕೇಕ್ ಮೇಳವನ್ನು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ನಮ್ಮ ವಿದ್ಯಾಸಂಸ್ಥೆಯಲ್ಲಿ ಕೇಕ್ ಮೇಳವನ್ನು ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಭಾಗವಹಿಸಿದ್ದಾರೆ. ಪರಸ್ಪರ ಉಡುಗೊರೆ ನೀಡುವುದು, ಪರಸ್ಪರ ಪ್ರೀತಿ, ಸಾಮರಸ್ಯದ ಜೀವನ ಕ್ರಿಸ್‌ಮಸ್ ತತ್ವಗಳಾಗಿವೆ. ವಿದ್ಯಾರ್ಥಿಗಳು ಈಗಿನಿಂದಲೇ ಸ್ನೇಹ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಕೇಕ್ ಮೇಳದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಹಾಗೂ ಸಜ್ಜುಗೊಳಿಸಿದ ಶಿಕ್ಷಕರನ್ನು ಅಭಿನಂದಿಸಿದರು.
ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯ ಒಟ್ಟು 26 ತಂಡಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದವು. ವಿದ್ಯಾರ್ಥಿಗಳೇ ಮನೆಯಲ್ಲಿ ಆಕರ್ಷಕ ವಿನ್ಯಾಸದ ಕೇಕ್ ತಯಾರಿಸಿ ಪ್ರದರ್ಶಿಸಿದರು. ಕೇಕ್ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಮಾತ್ರವಲ್ಲದೆ ಮಕ್ಕಳು ಕೇಕ್ ತಯಾರಿಕಾ ವಿಧಾನದ ಬಗ್ಗೆ ವಿವರಿಸಿದರು.ಈ ಸಂದರ್ಭ ಸಂತ ಅನ್ನಮ್ಮ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಐಡಾ, ಸಿಸ್ಟರ್ ರೋಸಿ, ಪ್ರೌಢ ಶಾಲೆ ಮುಖ್ಯಶಿಕ್ಷಕ ಬೆನ್ನಿ ಜೋಸೆಫ್, ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಉಪನ್ಯಾಸಕರಾದ ವಿಲೀನ ಗೋನ್ಸಾಲ್ವೇಸ್, ಮೋನಿಕಾ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.