ಕಾರು- ಬಸ್‌ ಡಿಕ್ಕಿ: 8ಜನರಿಗೆ ಗಾಯ

| Published : Jul 19 2024, 12:45 AM IST

ಸಾರಾಂಶ

ಜೋಡಗಟ್ಟೆ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಇನ್ನೋವಾ ಕಾರು ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಜೋಡಗಟ್ಟೆ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಇನ್ನೋವಾ ಕಾರು ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಒಂದು ಮಗು ಸೇರಿದಂತೆ ೮ ಮಂದಿಗೆ ಗಾಯಗಳಾಗಿದೆ. ಮೈಸೂರಿನಿಂದ ತಿಪಟೂರಿನ ಮಣಕಿಕೆರೆ ಕಡೆಗೆ ಸಾಗುತ್ತಿದ್ದ ಇನ್ನೋವಾ ಕಾರು ಮತ್ತು ಮೈಸೂರಿನ ಕಡೆ ಹೋಗುತ್ತಿದ್ದ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಈ ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುನಜ್ಜಾಗಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಲಾವಣ್ಯ ಸಿಂಗ್(೨೩), ಗೋಪಾಲ್ ಸಿಂಗ್ (೩೦), ಶಿವಕುಮಾರ್ ಸಿಂಗ್ (೪೫), ಲಕ್ಷ್ಮೀ ಬಾಯಿ (೪೦), ಸರಸ್ವತಿ ಬಾಯಿ(೫೦), ತುಳಸಿಬಾಯಿ (೩೫), ನಾಲ್ಕು ವರ್ಷದ ಗಂಡು ಮಗು ಸ್ನೇಹಾ ಸಿಂಗ್ ಗೆ ತೀವ್ರತರದ ಗಾಯಗಳಾಗಿವೆ. ಸ್ಥಳೀಯ ನೆರವಿನಿಂದ ಕೂಡಲೇ ಆಂಬ್ಯುಲೆನ್ಸ್ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಸಿಪಿಐ ಲೋಹಿತ್, ತುರುವೇಕೆರೆ ಪಿಎಸ್‌ಐ ಸಂಗಪ್ಪ ಮೇಟಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಸಾರ್ವಜನಿಕರ ಆಕ್ರೋಶ : ಕಳೆದ ಐದಾರು ತಿಂಗಳಿನಿಂದಲೂ ಸತತವಾಗಿ ಅಪಘಾತವಾಗುತ್ತಿದೆ. ಈಗಾಗಲೇ ಕಳೆದ ಒಂದು ತಿಂಗಳಿನಲ್ಲಿ ಐದಾರು ಅಪಘಾತಗಳಾಗಿ ಜೀವ ಹಾನಿ ಆಗಿದೆ. ಈ ಸಂಬಂಧ ರಸ್ತೆ ಅಗಲೀಕರಣ ಮಾಡಿ ಹಾಗೂ ರಸ್ತೆಯ ಅಕ್ಕ ಪಕ್ಕದ ಗಿಡಗಂಟೆಗಳನ್ನು ತೆರವುಗೊಳಿಸಿ ಎಂದು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಸಹ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳದಲ್ಲೇ ಸಾರ್ವಜನಿಕರು ಕೆಲ ಗಂಟೆಗಳ ಕಾಲ ಪ್ರತಿಭಟನೆ ಮಾಡಿದರು. ಮುಖಂಡರುಗಳಾದ ಬಿ.ಆರ್.ಮಹಲಿಂಗಯ್ಯ, ವಾಸು, ಶಿವಕುಮಾರ್, ಗುತ್ತಿಗೆದಾರ ಶಿವಕುಮಾರ್, ಗಂಗಾಧರ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ಮಾಡಿದರು. ಪೋಲಿಸರು ಪ್ರತಿಭಟನಾಕಾರರ ಮನವೊಲಿಸಿ ವಾಹನಗಳನ್ನು ತೆರಳುವಂತೆ ಮಾಡಿದರು. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.