ಬಿದ್ದ ಮರಗಳ ತೆರವಿಗೆ ಸ್ಥಳೀಯರ ಸಹಕಾರ

| Published : Jul 19 2024, 12:45 AM IST

ಸಾರಾಂಶ

ಬೇಲೂರು ತಾಲೂಕಿನಾದ್ಯಂತ ವಿಪರೀತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.ಲಿಂಗಾಪುರ ಗ್ರಾಮದ ಉದೇಯವಾರ ರಸ್ತೆಯಲ್ಲಿ ರಾತ್ರಿ ಸಮಯ ಅಡ್ಡಲಾಗಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಬೆಳಗಿನ ಸಮಯ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ನಂತರ ಸ್ಥಳೀಯರು ಲೈನ್‌ಮೆನ್‌ಗಳ ನೆರವಿನೊಂದಿಗೆ ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನಾದ್ಯಂತ ವಿಪರೀತ ಮಳೆಗೆ ಶಾಲಾ ಮಕ್ಕಳಿಗೆ ರಜೆಯನ್ನು ನೀಡಲಾಗಿದೆ. ಬಹುತೇಕ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕ ವರ್ಗದವರು ಹಾಗು ತೋಟದ ಕಾರ್ಮಿಕರು ಮನೆಯಲ್ಲಿದ್ದು ವಿಶ್ರಾಂತಿ ಪಡೆಯುವಂತಾಗಿದೆ. ಇನ್ನು ಅರೇಹಳ್ಳಿ ವ್ಯಾಪ್ತಿಗೆ ಸೇರಿದ ವಾಟೆಹಳ್ಳಿ, ಅನುಘಟ್ಟ, ಲಕ್ಕುಂದ ಹಾಗು ಇನ್ನಿತರ ಗ್ರಾಮೀಣ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಮರಗಳು ದರೆಗುಳಿದ್ದು ಸುಮಾರು 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮಳೆಯಾದರೂ ಲೆಕ್ಕಿಸದೆ ಲೈನ್‌ಮೆನ್‌ಗಳು ನಿರಂತರ ಕಾರ್ಯ ಚಟುವಟಿಕೆಗಳಿಂದ ವಿದ್ಯುತ್ ಅಡಚಣೆಗಳನ್ನು ನಿವಾರಿಸಲು ಹರಸಾಹಸಪಡುವಂತಾಗಿದೆ.ಲಿಂಗಾಪುರ ಗ್ರಾಮದ ಉದೇಯವಾರ ರಸ್ತೆಯಲ್ಲಿ ರಾತ್ರಿ ಸಮಯ ಅಡ್ಡಲಾಗಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಬೆಳಗಿನ ಸಮಯ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ನಂತರ ಸ್ಥಳೀಯರು ಲೈನ್‌ಮೆನ್‌ಗಳ ನೆರವಿನೊಂದಿಗೆ ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬುಧವಾರ ರಾತ್ರಿ ಬೇಲೂರು - ಸಕಲೇಶಪುರ ಮುಖ್ಯ ರಸ್ತೆಗೆ ಬೃಹದಾಕಾರದ ಆಲದ ಮರವೊಂದು ಅಡ್ಡಲಾಗಿ ಬಿದ್ದಿದ್ದು ಸ್ಥಳೀಯ ವಾಹನ ಸವಾರರು ಪರ್ಯಾಯ ರಸ್ತೆಯನ್ನು ಬಳಸಿ ಸಂಚಾರ ಮಾಡುತ್ತಿದ್ದರೆ, ಇನ್ನೂ ದೂರದ ಊರುಗಳಿಂದ ತೆರಳುತ್ತಿದ್ದ ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯಬೇಕಾಯಿತು. ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಸುಮಾರು 4 ಗಂಟೆಗಳ ಸಮಯದಲ್ಲಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.