ಕನ್ನಡ ಹೋರಾಟಗಾರರ ಕೇಸ್‌ಗಳು ವಾಪಸ್ : ಸಿಎಂ ಸಿದ್ದರಾಮಯ್ಯ

| N/A | Published : Nov 02 2025, 02:45 AM IST / Updated: Nov 02 2025, 06:06 AM IST

CM Siddaramaiah
ಕನ್ನಡ ಹೋರಾಟಗಾರರ ಕೇಸ್‌ಗಳು ವಾಪಸ್ : ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪರ ಹೋರಾಟಗಾರರ ಮೇಲೆ ಹೂಡಲಾಗಿರುವ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಾಜ್ಯೋತ್ಸವ ಸಮಿತಿಯಿಂದ ಭುವನೇಶ್ವರಿ ಹಾಗೂ ಅಣ್ಣಮ್ಮ ದೇವತೆಯ ವೈಭವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

  ಬೆಂಗಳೂರು :  ಕನ್ನಡಪರ ಹೋರಾಟಗಾರರ ಮೇಲೆ ಹೂಡಲಾಗಿರುವ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಾಜ್ಯೋತ್ಸವ ಸಮಿತಿಯಿಂದ ಶನಿವಾರ ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಭುವನೇಶ್ವರಿ ಹಾಗೂ ಅಣ್ಣಮ್ಮ ದೇವತೆಯ ವೈಭವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪರ ಇರುವವರು, ಹೋರಾಟಗಾರರ ಪರವಾಗಿ ನಮ್ಮ ಸರ್ಕಾರ ಇರುತ್ತದೆ. ಕನ್ನಡಪರ ಹೋರಾಟಗಳನ್ನು ಮುಂದುವರೆಸಬೇಕು. ವಾಟಾಳ್ ನಾಗರಾಜ್ ಅವರು ತಮ್ಮ ಮೇಲೆ ಕೇಸ್‌ಗಳಿವೆ ವಾಪಸ್ ತೆಗೆದುಕೊಳ್ಳಿ ಎಂದಿದ್ದಾರೆ. ಅವುಗಳನ್ನು ವಾಪಸ್ ಪಡೆಯುತ್ತೇನೆ ಎಂದರು.

ಕನ್ನಡನಾಡಿನಲ್ಲಿ ಯಾರೇ ಆಗಲಿ ಜೀವನ ರೂಪಿಸಿಕೊಳ್ಳಬೇಕು ಎಂದರೆ ಕನ್ನಡವನ್ನು ಕಲಿಯಲೇ ಬೇಕಾದಂತಹ ಅನಿವಾರ್ಯ ವಾತಾವರಣ ಸೃಷ್ಟಿಸಬೇಕು. ನಿಮಗೆ ಯಾರಾದರೂ ಹಿಂದಿ, ತೆಲುಗು, ಮಲಯಾಳಂ, ತಮಿಳು ಭಾಷೆಯಲ್ಲಿ ಮಾತನಾಡಿಸಿದರೆ ಕನ್ನಡದಲ್ಲೇ ಉತ್ತರ ಕೊಡಬೇಕು. ಅನ್ಯ ರಾಜ್ಯಗಳಿಗೆ ತೆರಳಿದಾಗ ಅಲ್ಲಿನವರು ಅಲ್ಲಿನ ಭಾಷೆಯಲ್ಲೇ ಉತ್ತರ ನೀಡುತ್ತಾರೆ. ಅದೇ ಸ್ವಭಾವ ನಾವು ಬೆಳೆಸಿಕೊಳ್ಳಬೇಕು. ಆಗ, ಕರ್ನಾಟಕದಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಮರಣೋತ್ತರ ಡಾಕ್ಟರೇಟ್ ನೀಡಲು ಸೂಚಿಸುತ್ತೇನೆ. ಇಲ್ಲಿಯವರೆಗೂ ಅರಸು ಅವರಿಗೆ ಡಾಕ್ಟರೇಟ್ ಏಕೆ ನೀಡಿಲ್ಲ ಎಂಬುದನ್ನು ತಿಳಿದು ಶಾಕ್ ಆಗಿದೆ. ಈ ಬಗ್ಗೆ ಗಮನ ಹರಿಸುತ್ತೇನೆ. ಮೈಸೂರು ವಿವಿಯಲ್ಲಿ ನನಗೆ ಹಿಂದೆಯೇ ಡಾಕ್ಟರೇಟ್ ಕೊಡುತ್ತೇವೆ ಎಂದಿದ್ದರು. ಆದರೆ, ನಾನು ಪಡೆಯಲಿಲ್ಲ. ಬೇಡ ಅಂದೆ. ಓದಿ, ಜ್ಞಾನ ವಿಸ್ತಾರ ಮಾಡಿಕೊಂಡು ಡಾಕ್ಟರೇಟ್ ಪಡೆಯಬೇಕು ಎನ್ನುವುದು ನನ್ನ ವೈಯುಕ್ತಿಕ ಭಾವನೆ ಎಂದರು.

ಮಹಾಜನ್‌ ವರದಿಯೇ ಅಂತಿಮ:

ಬೆಳಗಾವಿ ವಿಚಾರದಲ್ಲಿ ರಾಜಿ ಇಲ್ಲ. ಮಹಾಜನ್ ವರದಿಯೇ ಅಂತಿಮ. ಬೆಳಗಾವಿ ಕನ್ನಡದ ನೆಲ, ಕರ್ನಾಟಕದ ಭಾಗ. ಇದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿಂದೆ ಎಂಇಎಸ್‌ನವರು ಬೆಳಗಾವಿಯಲ್ಲಿ 5 ಸೀಟು ಗೆಲ್ಲುತ್ತಿದ್ದರು. ಈಗ ಒಂದೂ ಇಲ್ಲ. ಅಷ್ಟರಮಟ್ಟಿಗೆ ಕನ್ನಡ ಹೋರಾಟ ಪ್ರಬಲವಾಗಿದೆ. ಅವರಲ್ಲಿ ಯಾರಾದರೂ ಪುಂಡಾಟಿಕೆ ಮಾಡಿದರೆ ಮಟ್ಟ ಹಾಕುತ್ತೇವೆ. ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಆರೋಗ್ಯ ಚೆನ್ನಾಗಿರುವವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಬೇಕು. ಅವರಿಂದ ರಾಜ್ಯದಲ್ಲಿ ಶಾಂತಿ, ಪ್ರೀತಿ ನೆಲೆಸುತ್ತದೆ. ಯಾರ ಒತ್ತಡಕ್ಕೂ ಮಣಿಯಬೇಕಿಲ್ಲ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅಂಥ ಸಂದರ್ಭ ಬಂದರೆ ನೋಡಿಯೇ ಬಿಡೋಣ. ನಾವೆಲ್ಲರೂ ನಿಮ್ಮ ಜೊತೆ ಇರುತ್ತೇವೆ. ಕನ್ನಡ ಹೋರಾಟಗಾರರ ಮೇಲಿನ ವಾಪಸ್ ಪಡೆಯಬೇಕು. ನನ್ನ ಮೇಲೆ 46 ಕೇಸ್‌ಗಳಿವೆ. ಪೊಲೀಸರು ನಿತ್ಯ ಸಮನ್ಸ್ ಕೊಡುತ್ತಾರೆ ಎಂದರು.

ಕನ್ನಡಪರ ಹೋರಾಟಗಾರರಾದ ಪ್ರವೀಣ್ ಶೆಟ್ಟಿ, ಶಿವರಾಮೇಗೌಡ, ಗೋವಿಂದು ಸೇರಿ ಇನ್ನಿತರರು ಉಪಸ್ಥಿತರಿದ್ದರು.

ಬೆಳಗಾವಿ ಪುಂಡಾಟ ಮಟ್ಟ ಹಾಕುತ್ತೇವೆ

ಬೆಳಗಾವಿ ವಿಚಾರದಲ್ಲಿ ರಾಜಿ ಇಲ್ಲ. ಮಹಾಜನ್ ವರದಿಯೇ ಅಂತಿಮ. ಯಾರಾದರೂ ಪುಂಡಾಟಿಕೆ ಮಾಡಿದರೆ ಮಟ್ಟ ಹಾಕುತ್ತೇವೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

Read more Articles on