ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿ ಹಾಡು ಹಗಲೇ ಮನೆ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಗುರುವಾರ ವರದಿಯಾಗಿದೆ. ಈ ಸಂಬಂಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರ: ತಾಲೂಕಿನ ಹಣಕೋಣ ಗ್ರಾಮದಲ್ಲಿ ಹಾಡು ಹಗಲೇ ಮನೆ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಗುರುವಾರ ವರದಿಯಾಗಿದೆ. ಈ ಸಂಬಂಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕೋಣ ಗ್ರಾಮದ ನಿವೃತ್ತ ಶಿಕ್ಷಕ ಶ್ರೀರಾಮ ಕೃಷ್ಣ ನಾಯ್ಕ ಅವರು ನೀಡಿದ ದೂರಿನಂತೆ, ಜ. 29ರಂದು ಬೆಳಗ್ಗೆ 10.30ರ ಸುಮಾರಿಗೆ ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಿ ಪತ್ನಿಯ ಚಿಕಿತ್ಸೆಗೆಂದು ಕಾರವಾರ ಕಾಜುಭಾಗದ ಡೆಂಟಲ್ ಕ್ಲಿನಿಕ್‌ಗೆ ತೆರಳಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಗೆ ಮರಳಿ ಬಂದಾಗ, ಮನೆಯ ಮುಖ್ಯ ಬಾಗಿಲಿನ ಬೀಗ ಹಾಗೂ ಇಂಟರ್‌ಲಾಕ್ ಮುರಿದಿರುವುದು ಗಮನಕ್ಕೆ ಬಂದಿದೆ. ಮನೆಯ ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ, ಬೆಡ್ ರೂಮಿನಲ್ಲಿದ್ದ ಪ್ಲೈವುಡ್ ಕಪಾಟನ್ನು ತೆರೆಯಲಾಗಿದ್ದು, ಅದರೊಳಗಿದ್ದ ನಗದು ಹಾಗೂ ಇತರ ಸ್ವತ್ತುಗಳು ಕಳುವಾಗಿರುವುದು ಪತ್ತೆಯಾಗಿದೆ.

ಈ ಕುರಿತು ಶ್ರೀರಾಮ ಅವರು ಚಿತ್ತಾಕುಲಾ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳವು ಮಾಡಿದ ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಅಂಗಡಿ ಬೀಗ ಮುರಿದು ಕಳ್ಳತನ: ಹೊನ್ನಾವರ ತಾಲೂಕಿನ ಅರೇಅಂಗಡಿಯಲ್ಲಿ ನಾಲ್ಕು ಅಂಗಡಿ ಬೀಗ ಮುರಿದು ಒಳನುಗ್ಗಿದ ಕಳ್ಳರು ನಗದು ಹಣ ಕದ್ದು ಪರಾರಿಯಾಗಿರುವ ಘಟನೆ ವರದಿಯಾಗಿದೆ.ಕಳೆದ ಮೂರ್ನಾಲ್ಕು ದಿನದ ಹಿಂದೆ ರಾತ್ರಿ ಸಮಯದಲ್ಲಿ ಅರೇಅಂಗಡಿಯ ಹುಡಗೊಡಮಕ್ಕಿ ಸಮೀಪದ ಔಷಧಿ ಅಂಗಡಿ, ವೆಲ್ಡಿಂಗ್ ಶಾಪ್, ಬ್ಯೂಟಿಪಾರ್ಲರ್ ಈ ಮೂರು ಅಂಗಡಿ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ನಗದು ಹಣ ದೋಚಿ ಪರಾರಿಯಾಗಿದ್ದಾರೆ. ಇನ್ನು ಸರ್ಕಲ್ ಸಮೀಪದ ಐಸ್ ಕ್ರೀಂ ಅಂಗಡಿಯ ಬೀಗ ಮುರಿದಿದ್ದು, ಕಡ್ಲೆ ಕ್ರಾಸ್ ಬಳಿ ಅಂಗಡಿಯ ಬೀಗ ಮುರಿದು ಒಳಗಡೆ ನುಗ್ಗಿ ಹಣ ದೋಚಿದ್ದಾರೆ. ಸರಿಸುಮಾರು ಐದು ಅಂಗಡಿಯಿಂದ ₹40 ಸಾವಿರಕ್ಕೂ ಅಧಿಕ ಹಣ ಕಳ್ಳತನವಾಗಿದೆ.ಪಿಎಸ್ಐ ಮಹಾಂತೇಶ ವಾಲ್ಮೀಕಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಇದೇ ಭಾಗದ ಮನೆಗೆ ನುಗ್ಗಿ ಚಿನ್ನಾಭರಣ, ನಗದು, ಕಳ್ಳತನ ಮಾಡಲಾಗಿತ್ತು. ಇದೀಗ ರಸ್ತೆಯ ಸನಿಹದಲ್ಲಿರುವ ಅಂಗಡಿ ಬೀಗ ಮುರಿಯುತ್ತಿರುವುದರಿಂದ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಮೂಡಿದೆ.