ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಸಿಂಥೆಟಿಕ್ ಡ್ರಗ್ ತಯಾರಿಕೆ ಕುರಿತಂತೆ ಅನುಮಾನಾಸ್ಪದ ಸ್ಥಳಗಳಲ್ಲಿ ವ್ಯಾಪಕ ತಪಾಸಣೆಗಳನ್ನು ನಡೆಸಿ, ಜಿಲ್ಲೆಯನ್ನು ಮಾದಕ ವಸ್ತುಗಳ ಬಳಕೆಯಿಂದ ಸಂಪೂರ್ಣ ಮುಕ್ತಗೊಳಿಸಲು ಎಲ್ಲ ಇಲಾಖೆಗಳು ಸಂಘಟಿತವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.

ಕಾರವಾರ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಸಿಂಥೆಟಿಕ್ ಡ್ರಗ್ ತಯಾರಿಕೆ ಕುರಿತಂತೆ ಅನುಮಾನಾಸ್ಪದ ಸ್ಥಳಗಳಲ್ಲಿ ವ್ಯಾಪಕ ತಪಾಸಣೆಗಳನ್ನು ನಡೆಸಿ, ಜಿಲ್ಲೆಯನ್ನು ಮಾದಕ ವಸ್ತುಗಳ ಬಳಕೆಯಿಂದ ಸಂಪೂರ್ಣ ಮುಕ್ತಗೊಳಿಸಲು ಎಲ್ಲ ಇಲಾಖೆಗಳು ಸಂಘಟಿತವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಎನ್‌ಕಾರ್ಡ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಸಾಯನಿಕ ವಸ್ತುಗಳನ್ನು ಬಳಸಿ ಡ್ರಗ್ಸ್ ತಯಾರು ಮಾಡುವ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಅನುಮಾನಾಸ್ಪದ ಸ್ಥಳಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು. ಹೆಚ್ಚಿನ ಪ್ರಮಾಣದಲ್ಲಿ ನಿಷೇಧಿತ ಮತ್ತು ಡ್ರಗ್ಸ್ ತಯಾರಿಕೆಗೆ ಬಳಸುವ ರಾಸಾಯನಿಕಗಳನ್ನು ಖರೀದಿಸುವವರ ಬಗ್ಗೆ ಹೆಚ್ಚಿನ ನಿಗಾ ಇಡಬೇಕು. ಶೆಡ್‌ಗಳನ್ನು ಮರೆಮಾಡಿ ಲ್ಯಾಬ್ ಮಾದರಿಯಲ್ಲಿ ಡ್ರಗ್ಸ್ ತಯಾರಿಕೆ ಮಾಡುವ ಸಾಧ್ಯತೆಗಳಿವೆ. ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಮಾದಕ ವಸ್ತುಗಳ ಸರಬರಾಜು ಮತ್ತು ಬಳಕೆ ಬಗ್ಗೆ ನಿರಂತರವಾಗಿ ಪರಿಶೀಲಿಸಬೇಕು ಎಂದರು.

ಜಿಲ್ಲೆಯಲ್ಲಿ ಪತ್ತೆಯಾಗಿರುವ ಮಾದಕ ವಸ್ತು ಸೇವನೆದಾರರಲ್ಲಿ 18ರಿಂದ 30 ವಯೋಮಾನದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಡ್ರಗ್ ಸೇವನೆಯಲ್ಲಿ ಪತ್ತೆಯಾಗಿ ಚಿಕಿತ್ಸೆ ಪಡೆದವರ ಬಗ್ಗೆ ಪ್ರತ್ಯೇಕ ದಾಖಲಾತಿ ನಿರ್ವಹಿಸಿ, ಅವರು ಸಂಪೂರ್ಣವಾಗಿ ಈ ವ್ಯಸನದಿಂದ ಬಿಡುಗಡೆಯಾಗುವವರೆಗೂ ಅವರ ಫಾಲೋಅಪ್‌ನಲ್ಲಿರಬೇಕು ಎಂದರು.

ಔಷಧ ಮಳಿಗೆಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧಗಳನ್ನು ವಿತರಣೆ ಮಾಡದಂತೆ ಎಲ್ಲ ಮೆಡಿಕಲ್ ಶಾಪ್‌ಗಳಿಗೆ ಸೂಚಿಸುವಂತೆ ಜಿಲ್ಲಾ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ, ಈಗಾಗಲೇ ಅಂಕೋಲಾ, ಕಾರವಾರ ಮತ್ತು ಮಿರ್ಜಾನ್‌ನಲ್ಲಿ ಈ ರೀತಿ ವೈದರ ಸಲಹಾ ಚೀಟಿ ಇಲ್ಲದೇ ಔಷಧ ವಿತರಿಸಿದ ಮಳಿಗೆಗಳ ಲೈಸೆನ್ಸ್ ಅಮಾನತು ಪಡಿಸಲಾಗಿದೆ ಎಂದರು.

ಜಿಲ್ಲೆಯ ಮೀನುಗಾರಿಕಾ ಬಂದರು, ಪೋರ್ಟ್ ಮತ್ತು ಬೀಚ್‌ನಲ್ಲಿ ಮಾದಕ ವಸ್ತುಗಳ ಸರಬರಾಜು ಮತ್ತು ಸೇವನೆ ಕುರಿತಂತೆ ಹೆಚ್ಚಿನ ತಪಾಸಣೆಗಳನ್ನು ನಡೆಸುವಂತೆ ಸೂಚಿಸಿದ ಅವರು, ಅಂಚೆ ಇಲಾಖೆಯಲ್ಲಿ ಸ್ವೀಕೃತವಾಗುವ ಅನುಮಾನಾಸ್ಪದ ಪಾರ್ಸೆಲ್ ಗಳನ್ನು ತಪಾಸಣೆ ನಡೆಸುವಂತೆ ಮತ್ತು ಮಾದಕ ವಸ್ತುಗಳ ಕುರಿತು ತಪಾಸಣೆಗಳನ್ನು ನಡೆಸುವ ಸಂದರ್ಭದಲ್ಲಿ ಎಲ್ಲ ಇಲಾಖೆಗಳು ಪೊಲೀಸ್ ಇಲಾಖೆಯ ಶ್ವಾನದಳದ ನೆರವು ಪಡೆಯುವಂತೆ ನಿರ್ದೇಶನ ನೀಡಿದರು.

ಪೊಲೀಸ್, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್, ಅಬಕಾರಿ, ಮೀನುಗಾರಿಕೆ, ಬಂದರು ಸೇರಿದಂತೆ ಎಲ್ಲ ಇಲಾಖೆಗಳು ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿರ್ಮೂಲನೆ ಕುರಿತು ಕಾರ್ಯದಲ್ಲಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಮತ್ತು ಪ್ರತಿ ತಿಂಗಳ ತಮ್ಮ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್, ಅಬಕಾರಿ, ಮೀನುಗಾರಿಕೆ, ಬಂದರು, ಶಿಕ್ಷಣ, ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.