ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದಿರುವ ನೇಮಕಾತಿ ಅಕ್ರಮ : ಉದ್ಯೋಗ ಪಡೆಯಲು ಯತ್ನಿಸಿದ 48 ಜನ ಬಂಧನ

| Published : Aug 31 2024, 01:34 AM IST / Updated: Aug 31 2024, 05:27 AM IST

ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದಿರುವ ನೇಮಕಾತಿ ಅಕ್ರಮ : ಉದ್ಯೋಗ ಪಡೆಯಲು ಯತ್ನಿಸಿದ 48 ಜನ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದಿರುವ ನೇಮಕಾತಿ ಅಕ್ರಮದಲ್ಲಿ ನಕಲಿ ದಾಖಲೆಗಳನ್ನು ಬಳಸಿ ಉದ್ಯೋಗ ಪಡೆಯಲು ಯತ್ನಿಸಿದ ಆರೋಪದ ಮೇಲೆ 48 ಜನರನ್ನು ಬಂಧಿಸಲಾಗಿದೆ. ಈ ಹಗರಣದಲ್ಲಿ ಸರ್ಕಾರಿ ನೌಕರರು ಮತ್ತು ಮಧ್ಯವರ್ತಿಗಳು ಸೇರಿದಂತೆ ಹಲವರು ಶಾಮೀಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

 ಬೆಂಗಳೂರು :  ಜಲಸಂಪನ್ಮೂಲ ಇಲಾಖೆಯ ‘ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ) ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿ ಸಂಬಂಧ ನಕಲಿ ದಾಖಲೆ ಸಲ್ಲಿಸಿ ಉದ್ಯೋಗ ಗಿಟ್ಟಿಸಲು ಯತ್ನಿಸಿದ್ದ ಆರೋಪದಡಿ 37 ಅನರ್ಹ ಅಭ್ಯರ್ಥಿಗಳು, ಮೂವರು ಸರ್ಕಾರಿ ನೌಕರರು, 11 ಮಂದಿ ಮಧ್ಯವರ್ತಿಗಳು ಸೇರಿ ಒಟ್ಟು 48 ಮಂದಿ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಕಲುಬುರಗಿ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನ ಪ್ರಾಂಶುಪಾಲ ಆನಂದ್, ಜೋಗ್ ಫಾಲ್ಸ್ ಕೆಪಿಟಿಸಿಎಲ್‌ ಕಚೇರಿಯ ಎಫ್‌ಡಿಎ ಕೃಷ್ಣ ಗುರುನಾಥ್ ರಾಥೋಡ್, ಜಲಸಂಪನ್ಮೂಲ ಇಲಾಖೆ(ಹಾಸನ) ಎಸ್‌ಡಿಎ ಗಂಗೂರು ಪ್ರದೀಪ್ ಹಾಗೂ ಹಾಸನದ ಟಿ.ರವಿ, ಮಳವಳ್ಳಿಯ ಪ್ರದೀಪ್, ಜೇವರ್ಗಿಯ ಎನ್.ನಿಂಗಪ್ಪ, ವಿಜಯಪುರದ ಸಿಂದಗಿ ನಿವಾಸಿ ಮಲ್ಲಿಕಾರ್ಜುನ್ ಸಂಪೂರ್, ಕಲುಬುರಗಿಯ ಮುಸ್ತಫಾ ಮತ್ತು 37 ಅನರ್ಹ ಅಭ್ಯರ್ಥಿಗಳು ಸೇರಿ ಒಟ್ಟು 48 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 40 ಲಕ್ಷ ರು. ಮೌಲ್ಯದ 2 ಕಾರು, 17 ಮೊಬೈಲ್ ಹಾಗೂ ಹಾರ್ಡ್ ಡಿಸ್ಕ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಜಲಸಂಪನ್ಮೂಲ ಇಲಾಖೆಯಿಂದ 2022ರ ಅಕ್ಟೋಬರ್‌ನಲ್ಲಿ 182 ‘ಸಿ’ ವೃಂದದ ಎಸ್‌ಡಿಎ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಸಂಬಂಧ ನೇರ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಯಾವುದೇ ಲಿಖಿತ ಪರೀಕ್ಷೆ ನಡೆಸದೆ ದ್ವಿತೀಯ ಪಿಯುಸಿಯಲ್ಲಿ ಪಡೆದ ಅತಿ ಹೆಚ್ಚು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ನೇರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಆನ್‌ಲೈನ್‌ಲ್ಲಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು.

62 ಅಭ್ಯರ್ಥಿಗಳ ಅಂಕಪಟ್ಟಿ ನಕಲಿ:

ನೇಮಕಾತಿ ವಿಭಾಗದ ಅಧಿಕಾರಿಗಳು ಅರ್ಜಿ ಹಾಗೂ ಅಂಕಪಟ್ಟಿಗಳ ಪರಿಶೀಲನೆ ವೇಳೆ ರಾಜ್ಯದ 12 ಜಿಲ್ಲೆಗಳ 62 ಅಭ್ಯರ್ಥಿಗಳ ಅಂಕಪಟ್ಟಿಗಳು ನಕಲಿಯಾಗಿರುವುದು ಕಂಡು ಬಂದಿತ್ತು. ಈ ಸಂಬಂಧ ಅಧಿಕಾರಿಗಳು 2023ರ ಜುಲೈನಲ್ಲಿ ಶೇಷಾದ್ರಿಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲಾಗಿತ್ತು. ಇದೀಗ ತನಿಖೆ ನಡೆಸಿ ಅನರ್ಹ ಅಭ್ಯರ್ಥಿಗಳು, ಮಧ್ಯವರ್ತಿಗಳು ಸೇರಿದಂತೆ 48 ಮಂದಿಯನ್ನು ಬಂಧಿಸಲಾಗಿದೆ. ಈ ವಂಚನೆ ಜಾಲದಲ್ಲಿ ಇನ್ನೂ 25 ಮಂದಿ ಅನರ್ಹ ಅಭ್ಯರ್ಥಿಗಳು ಹಾಗೂ 6 ಮಂದಿ ಮಧ್ಯವರ್ತಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಸ್ಸಿ-ಎಸ್ಟಿ ಉದ್ಯೋಗಾಕಾಂಕ್ಷಿಗಳಿಗೆ ಬಲೆ:ಎಸ್‌ಡಿಎ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ನೇರನೇಮಕಾತಿ ವಿಚಾರ ತಿಳಿದ ಆರೋಪಿಗಳು, ಎಸ್ಸಿ-ಎಸ್ಟಿ ಉದ್ಯೋಗಾಂಕ್ಷಿಗಳಿಗೆ ಬಲೆ ಬೀಸಿ ವಂಚಿಸಲು ನಿರ್ಧರಿಸಿದ್ದರು. ಅದರಂತೆ ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದದ್ದ ಕೆಲ ಉದ್ಯೋಗಾಕಾಂಕ್ಷಿಗಳನ್ನು ಹುಡುಕಿ ಆಮಿಷವೊಡ್ಡಿ ಲಕ್ಷಾಂತರ ರು. ಹಣ ಪಡೆದು ನಕಲಿ ಅಂಕಪಟ್ಟಿ ಸೃಷ್ಟಿಸಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿಸಿ ವಂಚಿಸಿದ್ದರು.

ವ್ಯವಸ್ಥಿತ ವಂಚಕರ ಜಾಲ:

ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ಸೃಷ್ಟಿಸುವಲ್ಲಿ ಮೂರು ಗ್ಯಾಂಗ್‌ಗಳು ವ್ಯವಸ್ಥಿತವಾಗಿ ಕೆಲಸ ಮಾಡಿವೆ. ಓರ್ವ ತಾನೇ ಕಂಪ್ಯೂಟರ್‌ನಲ್ಲಿ ಅಂಕಪಟ್ಟಿಗಳ ಫಾರ್ಮ್ಯಾಟ್‌ ಇಟ್ಟುಕೊಂಡು ಕೇವಲ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಬದಲಾಯಿಸಿ ಕೊಡುತ್ತಿದ್ದ. ಮತ್ತೊಬ್ಬ ಪಶ್ಚಿಮ ಬಂಗಾಳದಿಂದ, ಮಗದೊಬ್ಬ ಹರಿಯಾಣದಿಂದ ದ್ವಿತೀಯ ಪಿಯುಸಿ, 12ನೇ ತರಗತಿ ಸಿಬಿಎಸ್‌ಇ, ದ್ವಿತೀಯ ಪಿಯುಸಿಯ ತತ್ಸಮಾನವಾದ ಎನ್‌ಐಓಎಸ್ ಅಂಕಪಟ್ಟಿ ತರಿಸಿಕೊಂಡು ತಿದ್ದುಪಡಿ ಮಾಡಿ ವಂಚಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳು ದ್ವಿತೀಯ ಪಿಯುಸಿ ಪಾಸ್‌ ಆಗಿ ಕಡಿಮೆ ಅಂಕ ಪಡೆದವರಿಂದ 1 ಲಕ್ಷ ರು.ನಿಂದ 1.50 ಲಕ್ಷ ರು. ವರೆಗೂ ಪಡೆದು ನಕಲಿ ಅಂಕಪಟ್ಟಿ ನೀಡಿದ್ದಾರೆ. ದ್ವಿತೀಯ ಪಿಯುಸಿ ಅನುತ್ತೀರ್ಣರಾದವರ ಬಳಿ 2 ಲಕ್ಷ ರು. ಪಡೆದು ಉತ್ತೀರ್ಣದ ನಕಲಿ ಅಂಕಪಟ್ಟಿ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸರ್ಕಾರಿ ನೌಕರರ ತೋರಿಸಿ ಉದ್ಯೋಗ ಭರವಸೆ

ಮಧ್ಯವರ್ತಿಗಳು ಅಮಾಯಕರನ್ನೇ ಹುಡುಕಿ ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ. ಈ ಮೂವರು ಸರ್ಕಾರಿ ನೌಕರರನ್ನು ತೋರಿಸಿ ಉದ್ಯೋಗದ ಭರವಸೆ ಕೊಡಿಸಿ, ಹಣ ಪಡೆದು ನಕಲಿ ಅಂಕಪಟ್ಟಿ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಸಿಸಿಬಿ ಪೊಲೀಸರು ಪ್ರಕರಣದ ತನಿಖೆಗೆ ಇಳಿದು ಬಂಧಿಸುವವರೆಗೂ ತಾವೂ ವಂಚನೆಗೆ ಒಳಗಾಗಿರುವುದು ಗೊತ್ತೇ ಇರಲಿಲ್ಲ. ಮಧ್ಯವರ್ತಿಗಳು ಹಾಗೂ ಸರ್ಕಾರಿ ನೌಕರರು ವಂಚಿಸುವ ಉದ್ದೇಶದಿಂದಲೇ ಅಮಾಯಕರಿಗೆ ಸರ್ಕಾರಿ ಉದ್ಯೋಗದ ಆಸೆ ತೋರಿಸಿ ಹಣ ಪಡೆದುಕೊಂಡಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

12 ಜಿಲ್ಲೆಗಳ 62 ಅಭ್ಯರ್ಥಿಗಳು

ಸಿಸಿಬಿ ತನಿಖೆ ವೇಳೆ ಹಾಸನ ಜಿಲ್ಲೆಯ 12 ಅಭ್ಯರ್ಥಿಗಳನ್ನು ಮೊದಲಿಗೆ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ನಕಲಿ ಅಂಕಪಟ್ಟಿ ಜಾಲ ಬೆಳಕಿಗೆ ಬಂದಿದೆ. ಅಂತೆಯೆ ಕಲುಬುರಗಿ 25, ವಿಜಯಪುರ 8 ಬೀದರ್ 6, ಬೆಳಗಾವಿ 3 ಯಾದಗಿರಿ 2 ಮತ್ತು ಚಿತ್ರದುರ್ಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ವಿಜಯನಗರದಲ್ಲಿ ತಲಾ ಓರ್ವ ಸೇರಿ ಒಟ್ಟು 62 ಅಭ್ಯರ್ಥಿಗಳು ಎಸ್‌ಡಿಎ ಉದ್ಯೋಗಕ್ಕಾಗಿ ನಕಲಿ ಅಂಕಪಟ್ಟಿ ಸಲ್ಲಿಸಿದ್ದಾರೆ. ಈ ಪೈಕಿ 37 ಮಂದಿ ಬಂಧಿತರಾಗಿದ್ದಾರೆ.

ಏನಿದು ಅಕ್ರಮ?- ಜಲಸಂಪನ್ಮೂಲ ಇಲಾಖೆಯ 182 ಎಸ್‌ಡಿಎ ಬ್ಯಾಗ್‌ಲಾಗ್‌ ಹುದ್ದೆ ಭರ್ತಿಗೆ 2022ರಲ್ಲಿ ಅರ್ಜಿ ಆಹ್ವಾನ

- ನೇರ ನೇಮಕಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕಾರ. ಹೆಚ್ಚು ಅಂಕ ಪಡೆದವರ ನೇಮಕಕ್ಕೆ ಪ್ರಕ್ರಿಯೆ

- ಅರ್ಜಿ ಪರಿಶೀಲನೆ ವೇಳೆ 62 ಅಭ್ಯರ್ಥಿಗಳ ಅಂಕಪಟ್ಟಿ ನಕಲಿಯಾಗಿರುವುದು ಪತ್ತೆ. ದೂರು ದಾಖಲು

- ಇದೀಗ ಸಿಸಿಬಿಯಿಂದ ತನಿಖೆ. ಅನರ್ಹ ಅಭ್ಯರ್ಥಿಗಳ ಸೇರಿ 48 ಜನರ ಬಂಧನ, ಇನ್ನೂ 31 ಜನಕ್ಕೆ ಬಲೆ