ಕನ್ನಡಪ್ರಭ ವಾರ್ತೆ ಮಡಿಕೇರಿ
ಕಕ್ಕಡ 18ರ ಪ್ರಯುಕ್ತ ಸೋಮವಾರ ಕೊಡಗಿನ ಮನೆ ಮನೆಗಳಲ್ಲಿ ಮದ್ದು ಸೊಪ್ಪಿನ ಪಾಯಸ ಘಮಘಮಸುತ್ತಿತ್ತು.ಮುಂಗಾರಿನ ಆಷಾಡ ಮಾಸದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಮಗ್ನರಾಗುವ ರೈತಾಪಿ ವರ್ಗದ ಆರೋಗ್ಯ ಸಂರಕ್ಷಣೆಯಲ್ಲಿ ಜಾನಪದ ಆಚರಣೆಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಅಂತಹ ಒಂದು ಕೊಡಗಿನ ವಿಶಿಷ್ಟ ಆಚರಣೆಯಾಗಿರುವ, ಕೊಡವ ಸಂಪ್ರದಾಯದಲ್ಲಿ ತನ್ನದೇ ಆದ ಮಹತ್ವವಿರೋ ‘ಕಕ್ಕಡ ಪದಿನೆಟ್ಟ್’ನ್ನು ಜಿಲ್ಲೆಯ ಸರ್ವ ಜನಾಂಗ ಬಾಂಧವರು ಸಾಂಪ್ರದಾಯಿಕವಾಗಿ ಆಚರಿಸಿದರು.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕಂಡುಬರುವ 18 ಮೂಲಿಕೆಗಳ ಔಷಧಿಯ ಗುಣಗಳನ್ನು ಹೊಂದಿರುವ ಮದ್ದ್ ಸೊಪ್ಪು ಆಟಿ ಪದಿನೆಟ್ಟ್ ಆಚರಣೆಯಲ್ಲಿ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಅನಾದಿ ಕಾಲದಿಂದಲೂ ಹಿರಿಯರು ರೂಢಿಸಿಕೊಂಡು ಬಂದಿರುವ ಸಾಂಪ್ರದಾಯಕ ರೀತಿಯಲ್ಲೇಮದ್ದ್ ಸೊಪ್ಪಿನ ರಸದಿಂದ ಪಾಯಸ, ತಟ್ಟೆ ಹಿಟ್ಟು, ಹಲ್ವ ಹೀಗೆ ವಿವಿಧ ಬಗೆಯ ಖಾದ್ಯಗಳನ್ನು ಮಾಡಿ ಸವಿಯುವ ಮೂಲಕ ಸಂಭ್ರಮಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ದಿನದ ವಿಶೇಷವಾದ ಆಟಿ ಸೊಪ್ಪಿನ ಭರಾಟೆ ಜೋರಾಗಿತ್ತು. ಗ್ರಾಮೀಣ ಭಾಗದಿಂದ ತರಲಾದ ಮದ್ದಿನ ಸೊಪ್ಪನ್ನು ಮಾರಾಟ ಸಮಾಡಲಾಗುತ್ತಿತ್ತು. ಜನರು ಕೂಡ ಆಟಿ ಸೊಪ್ಪು ಖರೀದಿಗೆ ಮುಗಿ ಬೀಳುತ್ತಿದ್ದುದು ಕಂಡುಬಂತು.