ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ: ಪಾಟೀಲ

| Published : Nov 24 2025, 02:30 AM IST

ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ: ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬಿಗೆ ಬೆಲೆ ನಿಗದಿ ಮಾಡುವ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿರುವುದು ದುರದೃಷ್ಟಕರ. ಕಬ್ಬಿಗೆ ಎಫ್‌ಆರ್‌ಪಿ ನಿಗದಿಗೊಳಿಸುವುದು ಕೇಂದ್ರ ಸರ್ಕಾರ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಹುಬ್ಬಳ್ಳಿ: ಕಬ್ಬಿಗೆ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ನಿಗದಿ ಮಾಡುವ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿರುವುದು ದುರದೃಷ್ಟಕರ. ಕಬ್ಬಿಗೆ ಎಫ್‌ಆರ್‌ಪಿ ನಿಗದಿಗೊಳಿಸುವುದು ಕೇಂದ್ರ ಸರ್ಕಾರ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಹ್ಲಾದ ಜೋಶಿ ಅವರು ಈ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಬಿಜೆಪಿಯವರೇ ಕೆಲ ಕಾರ್ಖಾನೆ ನಡೆಸುತ್ತಿದ್ದಾರೆ. ಖಾಸಗಿ ಸಕ್ಕರೆ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷರು ಕೂಡ ಬಿಜೆಪಿಯವರೇ ಇದ್ದಾರೆ. ಅವರೇ ಕೇಂದ್ರ ಸರ್ಕಾರದಲ್ಲಿ ಏನು ಆಗಿಲ್ಲ ಎನ್ನುವುದರ ಕುರಿತು ವರದಿ ನೀಡಿದ್ದಾರೆ. ಈ ವರದಿ ಕುರಿತು ಪ್ರಹ್ಲಾದ್ ಜೋಶಿ ಮೊದಲು ಪ್ರತಿಕ್ರಿಯೆ ಕೊಡಲಿ. ತಮ್ಮ ಬಳಿ ದಾಖಲೆ ಇರದೇ ಇದ್ದರೆ ನನ್ನ ಬಳಿ ದಾಖಲೆಗಳಿವೆ ಎಂದರು.

ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ

ಕರ್ನಾಟಕ ಇತಿಹಾಸದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ನೇತೃತ್ವದಲ್ಲಿ ಒಂದು ಟನ್‌ಗೆ ಎಫ್‌ಆರ್‌ಪಿ ನಿಗದಿಕ್ಕಿಂತ ₹200ಕ್ಕೂ ಹೆಚ್ಚು ನೀಡಲಾಗಿದೆ. ಕೇವಲ ₹200 ಅಷ್ಟೇ ಅಲ್ಲ ಕೆಲವು ಕಡೆಗಳಲ್ಲಿ ₹300 ರಿಂದ ₹370ರ ವರೆಗೆ ಕೊಡಿಸಲಾಗಿದೆ. ಸಕ್ಕರೆ ಮಾರಾಟ, ನಿಯಂತ್ರಣ, ಇಥಿನಾಲ್ ಮಾರಾಟ ನಿಯಂತ್ರಣ ಮಾಡುವರು ಅವರು. ಸಾಕಷ್ಟು ಗೊಂದಲ ಇಟ್ಟುಕೊಂಡು ರಪ್ತು ಹಾಗೂ ಆಮದು ಮಾಡುವುದು ಕೇಂದ್ರ ಸರ್ಕಾರದವರು. ನಾವಿಂದು ದೇಶದಲ್ಲಿ ಅನ್ನ ತಿನ್ನುತ್ತಿರುವುದು ದಕ್ಷಿಣ ಭಾರತದ ರೈತರಿಂದ. ಆದರೆ, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದರು.

ದೂಷಿಸುವುದು ಸರಿಯಲ್ಲ

ಗೋವಿನಜೋಳಕ್ಕೆ ಬೆಂಬಲ ಬೆಲೆಗಾಗಿ ರೈತರ ಹೋರಾಟದ ವಿಚಾರಕ್ಕೆ ಪ್ರತಿಕ್ರಿಯಿಸಿದ ಪಾಟೀಲ, ಗೋವಿನಜೋಳಕ್ಕೆ ಯೋಗ್ಯ ಬೆಂಬಲ ಬೆಲೆ ನೀಡಲು ಪ್ರಯತ್ನ ನಡೆಯುತ್ತಿದೆ. ಗೋವಿನಜೋಳಕ್ಕೆ ಎಂಎಸ್‌ಪಿ ಬೆಲೆ ಘೋಷಣೆ ಮಾಡಿದ್ದು, ಎಂಎಸ್‌ಪಿ ನಿಯಂತ್ರಣ ಮಾಡುವವರು ಕೇಂದ್ರ ಸರ್ಕಾರದವರು. ಆದ್ದರಿಂದ ಕೇಂದ್ರವೇ ಈ ಬಗ್ಗೆ ನಿಗದಿ ಮಾಡಬೇಕು. ಎಲ್ಲವನ್ನೂ ತಂದು ರಾಜ್ಯ ಸರ್ಕಾರದ ಮೇಲೆ ಹಾಕಿದರೆ ಏನು ಮಾಡುವುದು. ಪದೇ ಪದೇ ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರವನ್ನೇ ದ್ವೇಷ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಹೈಕಮಾಂಡ್‌ಗೆ ಬಿಟ್ಟ ವಿಷಯ

ಸಿಎಂ ಪವರ್ ಶೇರಿಂಗ್ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವುದು, ಅಲ್ಲಿ ಏನು ಮಾತುಕತೆ ಆಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಇದೊಂದು ಪಕ್ಷದ ಆಂತರಿಕ ವಿಚಾರ. ಪಕ್ಷದ ವರಿಷ್ಠರು ಇದನ್ನೆಲ್ಲ ನೋಡಿಕೊಳ್ಳುತ್ತಿದ್ದಾರೆ. ಅಂತಿಮವಾಗಿ ಒಂದು ನಿರ್ಣಯಕ್ಕೆ ಬರುತ್ತಾರೆ. ನಾವೆಲ್ಲ ಪಕ್ಷದ ಜತೆಗೆ ಇರುತ್ತೇವೆ. ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರ್ ರಚನೆ ಕೂಡ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು, ಹಿರಿಯ ನಾಯಕರ ತೀರ್ಮಾನವೇ ಅಂತಿಮ ಎಂದರು.