ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮತದಾನ ಜಾಗೃತಿ ಅಭಿಯಾನದಡಿ ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳಾದ ಶಶಿಧರ ಕುರೇರ ನವನಗರದ ಬಸ್ ನಿಲ್ದಾಣದಲ್ಲಿ ಬಸ್ ಏರಿ ಪ್ರಯಾಣಿಕರಿಗೆ ಕರಪತ್ರ ಹಂಚುವ ಮೂಲಕ ಎಲ್ಲರ ಗಮನ ಸೆಳೆದರು.

ಜಿಲ್ಲಾ ಸ್ವೀಪ್ ಹಾಗೂ ಎನ್.ಡಬ್ಲ್ಯು.ಕೆ.ಆರ್.ಟಿಸಿ ಸಹಯೋಗದಲ್ಲಿ ಮಂಗಳವಾರ ನವನಗರದ ಬಸ್ ನಿಲ್ಲಾಣದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನದ ನಿಮಿತ್ತ ಬಸ್ ಏರಿ ಬಸ್‌ ನಲ್ಲಿದ್ದ ಪ್ರಯಾಣಿಕರಿಗೆ ಮತದಾನದ ಮಹತ್ವ ವಿವರಿಸಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.

ಕರಪತ್ರ ಹಂಚುವ ಮೂಲಕ ಪ್ರತಿ ಮತವೂ ಅಮೂಲ್ಯ ಜವಾಬ್ದಾರಿ, ನಾಗರಿಕರಾಗೋಣ, ಮತದಾನ ಮಾಡೋಣ ಎಂಬ ಸಂದೇಶ ಸಾರಿದರು. ಪ್ರಯಾಣಿಕರು ಉತ್ತಮ ಸ್ಪಂದನೆ ನೀಡಿದ್ದು, ಜಾಗೃತಿ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಸ್ ನಿಲ್ದಾಣದಕ್ಕೆ ಆಗಮಿಸಿದ ಪ್ರಯಾಣಿಕರು, ಸಾರ್ವಜನಿಕರು, ವೃದ್ಧರು ಹಾಗೂ ಯುವಕರಿಗೆ ಮತದಾನದ ಅಗತ್ಯತೆ, ತಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.

ನೆರೆದ ಜನರಿಗೆ ಜಿಪಂ ಸಿಧೊ ಕುರೇರ ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಮಾನವ ಸರಪಳಿ ನಿಮಾಣ ಮಾಡುವ ಮೂಲಕ ಮೇಣದ ಬತ್ತಿ ಹಚ್ಚಿಕೊಂಡು ನೆರದ ಪ್ರಯಾಣಿಕರ ಗಮನ ಸೆಳೆಯಲಾಯಿತು.


ಜಿಪಂ ಮುಖ್ಯ ಯೋಜನಾಧಿಕಾರಿ ಅಲ್ಲಮಪ್ರಭು, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ಜಿಲ್ಲಾ ಸಂಚಾರಿ ಅಧಿಕಾರಿ ಕೆ.ಕೆ. ಲಮಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.